ಕಾಂಬೊಡಿಯಾದಲ್ಲಿ ಸರ್ಕಾರದಿಂದ ನಿರ್ಮಾಣವಾಗಿದ್ದ 30 ಅಡಿ ಎತ್ತರದ ಹಿಂದೂ ದೇವರ ಪ್ರತಿಮೆಯನ್ನು ಬುಲ್ಡೋಜರ್ ನಿಂದ ನೆಲಸಮಗೊಳಿಸಲಾಗಿದೆ.
ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಹಲವು ದಶಕಗಳ ಗಡಿ ವಿವಾದದ ಹಿನ್ನೆಲೆಯಲ್ಲಿ ಥಾಯ್ಲೆಂಡ್ ಸೇನೆ 30 ಅಡಿ ಎತ್ತರದ ವಿಷ್ಣುವಿನ ಪ್ರತಿಮೆಯನ್ನು ನೆಲಸಮಗೊಳಿಸಿದೆ.
ವಿಷ್ಣು ಮೂರ್ತಿಯನ್ನು ಥಾಯ್ಲೆಂಡ್ ಸೇನೆ ಬುಲ್ಡೋಜರ್ ಬಳಸಿ ಹೊಡೆದು ಹಾಕಿದೆ ಎಂದು ಕಾಂಬೋಡಿಯಾ ಸರ್ಕಾರ ಆರೋಪಿಸಿದ್ದು, ಭಾರತ, ಆಗ್ನೇಯ ಏಷ್ಯಾದ ರಾಷ್ಟ್ರಗಳು ಈ ಕೃತ್ಯವನ್ನು ಖಂಡಿಸಿದೆ.
ಪ್ರಸ್ತುತ ಕಾಂಬೋಡಿಯಾದ ಅಧೀನದಲ್ಲಿರುವ ಆನ್ ಸೆಸ್ ಪ್ರದೇಶದಲ್ಲಿ 30 ಅಡಿ ಎತ್ತರದ ವಿಷ್ಣುವಿನ ಮೂರ್ತಿಯನ್ನು 2014ರಲ್ಲಿ ಕಾಂಬೋಡಿಯಾ ಸರ್ಕಾರ ನಿರ್ಮಿಸಿತ್ತು. ಈ ಪ್ರದೇಶ ತನ್ನದು ಎಂದು ವಾದಿಸುತ್ತಿರುವ ಥಾಯ್ಲೆಂಡ್ ಅನಧಿಕೃತ ಜಾಗದಲ್ಲಿ ಹಿಂದು ದೇವತೆಯ ಮೂರ್ತಿಯನ್ನು ನಿರ್ಮಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.
ಭಾರತ ತೀವ್ರ ಖಂಡನೆ
ವಿಷ್ಣುವಿನ ವಿಗ್ರಹವನ್ನು ಹೊಡೆದು ಹಾಕಿದ್ದನ್ನು ಭಾರತದ ವಿದೇಶಾಂಗ ಇಲಾಖೆ ಖಂಡಿಸಿದೆ. ಈ ಕೃತ್ಯವು ದೇಶವೊಂದರ ಸಂಸ್ಕೃತಿಗೆ ಮಾಡಿದ ಅವಮಾನ. ವಿಶ್ವದಾದ್ಯಂತ ಇರುವ ವಿಷ್ಣುವಿನ ಅನುಯಾಯಿಗಳ ಭಾವನೆಗೆ ಧಕ್ಕೆ ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
“ಥಾಯ್-ಕಾಂಬೋಡಿಯಾದ ವಿವಾದಿತ ಪ್ರದೇಶದಲ್ಲಿ ನೆಲೆಗೊಂಡಿದ್ದ ಹಿಂದೂ ದೇವತೆಯ ಪ್ರತಿಮೆಯನ್ನು ಧ್ವಂಸಗೊಳಿಸಿರುವ ವಿಡಿಯೋ ವೈರಲ್ ಆಗಿದೆ. ವಿಶ್ವದಲ್ಲಿ ಹಿಂದೂ ಮತ್ತು ಬೌದ್ಧ ದೇವತೆಗಳನ್ನು ಜನರು ಆಳವಾಗಿ ಪೂಜಿಸುತ್ತಾರೆ, ಆರಾಧಿಸುತ್ತಾರೆ. ಪ್ರತಿಮೆಯನ್ನು ಧ್ವಂಸ ಮಾಡುವ ಮೂಲಕ ಆರಾಧಕರ ಭಾವನೆಗಳಿಗೆ ನೋವುಂಟು ಮಾಡಲಾಗಿದೆ” ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
“ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷ ಕೊನೆಗಾಣಲು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗ ಅನುಸರಿಸಲು ಸಲಹೆ ನೀಡುತ್ತೇವೆ. ಶಾಂತಿ ಪುನಸ್ಥಾಪಿಸಿ, ಜೀವ, ಆಸ್ತಿ, ಪರಂಪರೆಗೆ ಆಗುವ ಹಾನಿಯನ್ನು ತಪ್ಪಿಸಲು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು.


