ವಿಶ್ವದ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್ ಮನ್ ಗಳಲ್ಲಿ ಒಬ್ಬರಾಗಿರುವ ವಿರಾಟ್ ಕೊಹ್ಲಿ 12 ವರ್ಷಗಳ ನಂತರ ರಣಜಿ ಕ್ರಿಕೆಟ್ ಗೆ ಮರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಾಯಕತ್ವ ನೀಡುವ ಮೂಲಕ ದೆಹಲಿ ತಂಡ ಗೌರವ ನೀಡಲು ಉದ್ದೇಶಿಸಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸತತ ವೈಫಲ್ಯ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ ದೇಶೀಯ ಕ್ರಿಕೆಟ್ ನಲ್ಲಿ ಆಡಲು ಹಿರಿಯ ಆಟಗಾರರಿಗೆ ಸೂಚಿಸಲಾಗಿದೆ. ಈ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ 12 ವರ್ಷಗಳ ನಂತರ ತವರು ದೆಹಲಿ ತಂಡವನ್ನು ಪ್ರತಿಧಿಸಲಿದ್ದಾರೆ.
2012ರಲ್ಲಿ ವಿರಾಟ್ ಕೊಹ್ಲಿ ಕೊನೆಯ ಬಾರಿಗೆ ರಣಜಿ ಪಂದ್ಯದಲ್ಲಿ ಆಡಿದ್ದರು. ಇದು ಅವರ ಕೊನೆಯ ದೇಶೀಯ ಪಂದ್ಯ ಕೂಡ ಆಗಿತ್ತು.
ಜನವರಿ 30ರಿಂದ ರೈಲ್ವೆಸ್ ವಿರುದ್ಧ ಆರಂಭವಾಗಲಿರುವ ರಣಜಿ ಪಂದ್ಯದಲ್ಲಿ ಆಡಲು ಕೊಹ್ಲಿ ಸಿದ್ಧತೆ ನಡೆಸಿದ್ದು, ತಂಡಕ್ಕೆ ಮರಳಿದ ಹಿನ್ನೆಲೆಯಲ್ಲಿ ದೆಹಲಿ ಕ್ರಿಕೆಟ್ ಸಂಸ್ಥೆ ಗೌರವಾರ್ಥವಾಗಿ ಕೊಹ್ಲಿಗೆ ತಂಡದ ನಾಯಕತ್ವವನ್ನು ನೀಡಿದೆ.
ಕೊಹ್ಲಿ ತಡಂಕ್ಕೆ ಮರಳಿದ ಹಿನ್ನೆಲೆಯಲ್ಲಿ ತಂಡದ ಕೋಚ್ ಸರಣ್ ದೀಪ್ ಸಿಂಗ್ ಜೊತೆ ಮಾತನಾಡಿದ್ದು, ಕೊಹ್ಲಿ ಯುವ ಆಟಗಾರರಿಗೆ ಸ್ಫೂರ್ತಿ ನೀಡುವ ಜೊತೆಗೆ ತರಬೇತಿಯ ಜವಾಬ್ದಾರಿಯನ್ನೂ ವಹಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ.
ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ಕೊಹ್ಲಿ ದೆಹಲಿ ತಂಡದ ಯುವ ಆಟಗಾರರ ಜೊತೆ ತರಬೇತಿ ಆರಂಭಿಸಿದ್ದು, ಯುವ ಆಟಗಾರರ ಜೊತೆ ಫುಟ್ಬಾಲ್ ಆಡಿರುವ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.