ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಆಧಾರಸ್ತಂಭ ವಿರಾಟ್ ಕೊಹ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 7 ವರ್ಷಗಳ ನಂತರ ಅತ್ಯಂತ ವೇಗದ ಅರ್ಧಶತಕ ಸಿಡಿಸಿ ತಮ್ಮ ದಾಖಲೆಯ ಆಟಕ್ಕೆ ಹೊಸ ಮೆರುಗು ನೀಡಿದ್ದಾರೆ.
ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ಮೂಲಕ 2018ರ ನಂತರ ದಾಖಲಿಸಿದ ಅತ್ಯಂತ ವೇಗದ ಅರ್ಧಶತಕವಾಗಿದೆ.
ಫಿಲ್ ಸಾಲ್ಟ್ ಬೇಗನೇ ಔಟಾಗಿದ್ದರಿಂದ ಪವರ್ ಪ್ಲೇ ಪೂರ್ಣ ಲಾಭ ಪಡೆಯುವ ಉದ್ದೇಶದಿಂದ ಹೊಡಿಬಡಿ ಆಟಕ್ಕೆ ಮುಂದಾದ ವಿರಾಟ್ ಕೊಹ್ಲಿ 19 ಎಸೆತಗಳಲ್ಲಿ 36 ರನ್ ಬಾರಿಸಿದರು. ಅಲ್ಲದೇ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು.
ವಿರಾಟ್ ಕೊಹ್ಲಿ ಅಂತಿಮವಾಗಿ 42 ಎಸೆತಗಳಲ್ಲಿ 8 ಬೌಂಡರಿ ಮತ್ತು 2 ಸಿಕ್ಸರ್ ಸೇರಿ 67 ರನ್ ಸಿಡಿಸಿ ಔಟಾದರು. ಅದರಲ್ಲೂ ವಿಶ್ವದ ನಂ.1 ಬೌಲರ್ ಜಸ್ ಪ್ರೀತ್ ಬುಮ್ರಾ ಓವರ್ ನಲ್ಲಿ ಬೌಂಡರಿ ಸಿಕ್ಸರ್ ಗಳನ್ನು ಸಿಡಿಸಿ ಗಮನ ಸೆಳೆದರು.
ಇದೇ ಪಂದ್ಯದಲ್ಲಿ 17 ರನ್ ಗಳಿಸುತ್ತಿದ್ದಂತೆ ವಿರಾಟ್ ಕೊಹ್ಲಿ ಅತ್ಯಂತ ವೇಗವಾಗಿ 13000 ರನ್ ಪೂರೈಸಿದ ವಿಶ್ವದ 2ನೇ ಬ್ಯಾಟ್ಸ್ ಮನ್ ಹಾಗೂ ಮೊದಲ ಭಾರತೀಯ ಎಂಬ ದಾಖಲೆಗೆ ಪಾತ್ರರಾದರು.
ಕೊಹ್ಲಿ ಮತ್ತು ರಜತ್ ಪಟಿದಾರ್ ಅರ್ಧಶತಕಗಳ ನೆರವಿನಿಂದ ಆರ್ ಸಿಬಿ 12 ರನ್ ಗಳಿಂದ ಮುಂಬೈ ತಂಡವನ್ನು ಸೋಲಿಸಿ ಮುಂಬೈ ನೆಲದಲ್ಲಿ 10 ವರ್ಷಗಳ ನಂತರ ಮೊದಲ ಬಾರಿ ಗೆದ್ದ ಸಾಧನೆ ಮಾಡಿತು.