ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ರನ್ ಮೆಷಿನ್ ವಿರಾಟ್ ಕೊಹ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಐಪಿಎಲ್ ಲೀಗ್ ನ ಕೊನೆಯ ಪಂದ್ಯದಲ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಪಂದ್ಯದಲ್ಲಿ ಆರ್ ಸಿಬಿ 228 ರನ್ ಗುರಿಯನ್ನು ಯಶಸ್ವಿಯಾಗಿ ಬೆಂಬತ್ತಿ 6 ವಿಕೆಟ್ ಗಳ ಮಹೋನ್ನತ ಗೆಲುವು ಸಾಧಿಸುವ ಮೂಲಕ 2ನೇ ಸ್ಥಾನಿಯಾಗಿ ಪ್ಲೇಆಫ್ ಪ್ರವೇಶಿಸಿತು. ಈ ಮೂಲಕ ಆರ್ ಸಿಬಿ 2009 ಮತ್ತು 2011ರ ನಂತರ ಮೂರನೇ ಬಾರಿ ಎರಡನೇ ಸ್ಥಾನ ಪಡೆದ ಸಾಧನೆ ಮಾಡಿತು.
ಆರ್ ಸಿಬಿಗೆ ಅಗತ್ಯವಾದ ಅದ್ಭುತ ಆರಂಭ ನೀಡಿದ ವಿರಾಟ್ ಕೊಹ್ಲಿ 27 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಮೂಲಕ ಕೊಹ್ಲಿ ಐಪಿಎಲ್ ನಲ್ಲಿ 64ನೇ ಅರ್ಧಶತಕ ಗಳಿಸಿದರು. ಈ ಮೂಲಕ ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಹೆಸರಿನಲ್ಲಿದ್ದ 63 ಅರ್ಧಶತಕಗಳ ದಾಖಲೆಯನ್ನು ಮುರಿದರು.
ವಿರಾಟ್ ಕೊಹ್ಲಿ ಒಂದೇ ತಂಡದ ಪರ 9000 ರನ್ ಪೂರೈಸಿದ ದಾಖಲೆ ಬರೆದರು. ಅಲ್ಲದೇ ಐಪಿಎಲ್ ನಲ್ಲಿ ಅತೀ ಹೆಚ್ಚು ರನ್ ಗಳಿಸಿದ ಮತ್ತೊಂದು ದಾಖಲೆಯನ್ನು ವಿಸ್ತರಿಸಿದರು. ರೋಹಿತ್ ಶರ್ಮ ಮುಂಬೈ ಇಂಡಿಯನ್ಸ್ ಪರ 6060 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ.
ಕೊಹ್ಲಿ 280 ಪಂದ್ಯಗಳಲ್ಲಿ 40ರ ಸರಾಸರಿಯಲ್ಲಿ 9004 ರನ್ ಗಳಿಸಿದ್ದಾರೆ.
ಹ್ಯಾಂಪ್ ಶೈರ್ ಪರ ಜೇಮ್ಸ್ ವಿನ್ಸಿ 5934 ರನ್ ಗಳಿಸಿ ಮೂರನೇ ಸ್ಥಾನದಲ್ಲಿದ್ದರೆ, ಚೆನ್ನೈ ಸೂಪರ್ ಕಿಂಗ್ಸ್ ಪರ ಸುರೇಶ್ ರೈನಾ 5528 ಮತ್ತು ಧೋನಿ 5314 ರನ್ ಗಳಿಸಿ ಕ್ರಮವಾಗಿ ನಾಲ್ಕು ಮತ್ತು 5ನೇ ಸ್ಥಾನದಲ್ಲಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್ ನಲ್ಲಿ ಅತೀ ಹೆಚ್ಚು ಬಾರಿ 600ಕ್ಕಿಂತ ಹೆಚ್ಚು ರನ್ ಗಳಿಸಿದ ಸಾಧನೆ ಮಾಡಿದ್ದಾರೆ. ಕೊಹ್ಲಿ 5 ಬಾರಿ ((2013, 2016, 2023, 2024, 2025)) 600ಕ್ಕಿಂತ ಹೆಚ್ಚು ರನ್ ಗಳಿಸಿದ್ದಾರೆ.
ಕನ್ನಡಿಗ ಕೆಎಲ್ ರಾಹುಲ್ 4 ಬಾರಿ (2018, 2020, 2021, 2022) ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ. ಆರ್ ಸಿಬಿ ಪರ ಕ್ರಿಸ್ ಗೇಲ್ 3 ಬಾರಿ (2011, 2012, 2013) ಮತ್ತು ಡೇವಿಡ್ ವಾರ್ನರ್ 3 ಬಾರಿ (2016, 2017, 2019) ನಂತರದ ಸ್ಥಾನದಲ್ಲಿದ್ದಾರೆ.