ಅಡ್ಡ ರಸ್ತೆಗಾಗಿ ಆಗ್ರಹಿಸಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಸ್ಥವನಿಧಿ ಘಾಟ್ ಬಳಿ ರಾಷ್ಟ್ರೀಯ ಹೆದ್ದಾರಿ 48 ಬಂದ್ ಮಾಡಿ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ತಡೆದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು, ನಮ್ಮ ಗ್ರಾಮಕ್ಕೆ ಅಡ್ಡ ರಸ್ತೆ ಬೇಕು, ಕೊಡದಿದ್ದರೆ ರಾಷ್ಟೀಯ ಹೆದ್ದಾರಿ ಬಂದ್ ಮಾಡುವುದಾಗಿ ಹೇಳಿದ್ದಾರೆ.
ಈ ಹೆದ್ದಾರಿ ಬಂದ್‌ನಿಂದ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು, ಪ್ರಯಾಣಿಕರು ಪರದಾಡುವಂತಾಯಿತು. ಸ್ಥಳಕ್ಕೆ ಎನ್‌ಹೆಚ್ ಸಿಬ್ಬಂದಿ ಆಗಮಿಸಿದ ಬಳಿಕ ಗ್ರಾಮಸ್ಥರೊಂದಿಗೆ ಮಾತಿನ ಚಕಮಕಿ ನಡೆಯಿತು.
ಬಂದ್ ಕೈ ಬಿಡುವಂತೆ ಮನವಿ ಮಾಡಿದರೂ ಪ್ರತಿಭಟನಾಕಾರರು ಒಪ್ಪಲಿಲ್ಲ. ಸ್ಥಳಕ್ಕೆ ನಿಪ್ಪಾಣಿ ಠಾಣೆಯ ಪೊಲೀಸರರು ಬಂದು ಗ್ರಾಮಸ್ಥರನ್ನು ತರಾಟೆಗೆ ತೆಗೆದುಕೊಂಡರು. ರಸ್ತೆಗೆ ಅಡ್ಡವಾಗಿರಿಸಿದ್ದ ಬ್ಯಾರಿಕೇಡ್ ಕಿತ್ತೆಸೆದ ಪೊಲೀಸರು ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.