ಬೆಂಗಳೂರು: ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಾಗದೆ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಅಕ್ರಮದ ಹೊಸ ಕಪಟ ನಾಟಕ ಮಾಡುತ್ತಿದೆ. ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಈ ಕಪಟ ನಾಟಕ ಮಾಡಲು ಮುಂದಾದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಟೀಕಿಸಿದ್ದಾರೆ.
ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಆಗಸ್ಟ್ 4 ಅಥವಾ 5ರಂದು ಬೆಂಗಳೂರಿಗೆ ಬಂದು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ; ಪಾದಯಾತ್ರೆ ಅಥವಾ ಧರಣಿ ಮಾಡುತ್ತಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಡವಳಿಕೆ ಗಮನಿಸಿದರೆ ಅಯ್ಯೋ ಪಾಪ ಅನಿಸುತ್ತದೆ ಎಂದು ಟೀಕಿಸಿದರು.
ಚುನಾವಣಾ ಆಯೋಗದ ಬಗ್ಗೆಯೂ ಅನುಮಾನ, ಸುಪ್ರೀಂ ಕೋರ್ಟಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸುತ್ತಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಬಳಿ ಪುರಾವೆ ಇದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದರು. ನೀವು ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿ ಎಂದು ಆಗ್ರಹಿಸಿದರು.
ಹೇಗಾದರೂ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಆದರೆ, ಗೆಲುವು ಸಾಧ್ಯವಾಗಿಲ್ಲ ಎಂದ ಅವರು, ಆರೋಪದಿಂದ ಅವರು ಏನೂ ಸಾಧನೆ ಮಾಡಲು ಸಾಧ್ಯವಾಗದು ಎಂದು ತಿಳಿಸಿದರು. ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದರೆ ನಾವು (ಬಿಜೆಪಿ) ಕರ್ನಾಟಕದಲ್ಲಿ ವಿಪಕ್ಷ ಸ್ಥಾನದಲ್ಲಿ ಕೂರುವ ಅವಶ್ಯಕತೆ ಇರಲಿಲ್ಲ ಎಂದು ಅವರು ತಿಳಿಸಿದರು. ಕಾಂಗ್ರೆಸ್ 66 ಶಾಸಕ ಸ್ಥಾನ ಪಡೆದರೆ, ಬಿಜೆಪಿ 136 ಸ್ಥಾನದಿಂದ ಅಧಿಕಾರಕ್ಕೆ ಏರುತ್ತಿತ್ತು ಎಂದು ವಿಶ್ಲೇಷಿಸಿದರು.
ಸಾಂವಿಧಾನಿಕ ಸಂಸ್ಥೆ ಬಗ್ಗೆ ಅನುಮಾನ ಅಪಾಯಕಾರಿ ಬೆಳವಣಿಗೆ
3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಗೆಲ್ಲುತ್ತಿತ್ತು. ಹಾಗಿದ್ದರೆ ಮೂರರಲ್ಲೂ ಕಾಂಗ್ರೆಸ್ ಗೆದ್ದದ್ದು ಹೇಗೆ ಎಂದು ಪ್ರಶ್ನಿಸಿದರು. ಇದು ಮೂರ್ಖತನದ ಪರಮಾವಧಿ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷ ಮೂರ್ಖರ ಪಕ್ಷವಾಗಿದೆ ಎಂದು ಟೀಕಿಸಿದರು.
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ 19 ಸ್ಥಾನಗಳನ್ನು ಗೆದ್ದಿವೆ. ಹಾಗಿದ್ದರೆ ರಾಯಚೂರು, ದಾವಣಗೆರೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಹೇಗೆ ಎಂದು ಕೇಳಿದರು. ಈ ರೀತಿ ಹುಚ್ಚಾಟ, ರಂಪಾಟದ ಮೂಲಕ ಸಾಂವಿಧಾನಿಕ ಸಂಸ್ಥೆ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸುವುದು ಅಪಾಯಕಾರಿ ಬೆಳವಣಿಗೆ; ಇದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು.
4 ಅಥವಾ 5ರಂದು ಅವರು ಬಂದು ಏನು ಕಡಿದು ಕಟ್ಟೆ ಹಾಕುತ್ತಾರೆಂದು ಬಿಜೆಪಿ ನೋಡುತ್ತದೆ ಎಂದರು. ನಾವು ಕೂಡ ಕಾರ್ಯತಂತ್ರ ರೂಪಿಸುತ್ತೇವೆ ಎಂದು ತಿಳಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ, ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆಗೆ ಮುಂದಾದರೆ ಕಮೀಷನರ್ ಅವರು ಹೈಕೋರ್ಟಿನ ಆದೇಶ ತೋರಿಸುತ್ತಾರೆ. ಸಿದ್ದರಾಮಯ್ಯನವರು ಎಲ್ಲಿಂದ ಬೇಕಿದ್ದರೂ ಪಾದಯಾತ್ರೆ ಮಾಡಬÀಹುದು, ರಾಹುಲ್ ಗಾಂಧಿಯವರು ಮೆರವಣಿಗೆ ಮಾಡಬಹುದು; ಇದು ಖಂಡಿತ ಸರಿಯಲ್ಲ ಎಂದು ಟೀಕಿಸಿದರು. ನಮಗೊಂದು ಕಾನೂನು, ಅವರಿಗೊಂದು ಕಾನೂನು ಇರಲು ಸಾಧ್ಯವಿಲ್ಲ ಎಂದರು. ಅವರಿಗೆ ಅವಕಾಶ ನೀಡಿದರೆ ನಾವೂ ಹೋರಾಟ ಮಾಡುತ್ತೇವೆ. ಅದನ್ನು ತಡೆಯಬಾರದು ಎಂದು ನುಡಿದರು.