ವಿಜಯಪುರ ನಗರದ ಗಾಂಧಿಚೌಕ್ ವೃತ್ತದ ಟಾಂಗಾ ಸ್ಟ್ಯಾಂಡ್ ಬಳಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ವಿದ್ಯುತ್ ಶಾಕ್ ಆಗಿ ಯುವಕ ಮೃತಪಟ್ಟಿದ್ದಾನೆ.
ಗಣೇಶನ ಮೂರ್ತಿ ಸಾಗಲು ಅನುಕೂಲವಾಗಲೆಂದು ಕೋಲಿನಿಂದ ವಿದ್ಯುತ್ ತಂತಿ ಮೇಲೆತ್ತುವ ವೇಳೆ ವಿದ್ಯುತ್ ಪ್ರವಹಿಸಿ ವಿಜಯಪುರ ನಗರದ ಡೋಬಲೆ ಗಲ್ಲಿ ನಿವಾಸಿ ಶುಭಂ ಸಂಕಳ (21) ಅಸು ನೀಗಿದ್ದಾರೆ. ಸೋಲಾಪುರದ ಡಿಜೆ ಯುವಕ ಪ್ರಭಾಕರ್ ಜಂಗಲೆ (22), ಡೋಬಲೆ ಗಲ್ಲಿಯ ಲಖನ್ ಶ್ರೀಕಾಂತ್ ಚವ್ಹಾಣ್ (28) ಸ್ಥಿತಿ ಗಂಭೀರವಾಗಿದೆ.
ದುರಂತ ಸಂಭವಿಸಿದ ಕೂಡಲೇ ಎಲ್ಲ ಗಣೇಶನ ಮೂರ್ತಿಗಳನ್ನು ಕಳುಹಿಸಿದ ಪೊಲೀಸರು ಸ್ಥಳದಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ. ಡಿವೈಎಸ್ಪಿ ಬಸವರಾಜ ಯಲಿಗಾರ ಹಾಗೂ ಇತರ ಅಧಿಕಾರಿಗಳು ಸ್ಥಳದಲ್ಲಿ ನಿಂತು ಗಣೇಶ ವಿಸರ್ಜನೆ ಮೆರವಣಿಗೆಗಳು ನಿರಾತಂಕವಾಗಿ ನಡೆಯುವಂತೆ ನಿರ್ವಹಿಸಿದ್ದಾರೆ.
ವಿಜಯಪುರ ನಗರದಲ್ಲಿ ಏಳನೇ ದಿನ ನೂರಾರು ಗಣೇಶನ ಮೂರ್ತಿಗಳು ವಿಸರ್ಜನೆ ಆಗುತ್ತವೆ. ಸಾರ್ವಜನಿಕ ಮಂಡಳಿಗಳು ಪ್ರತಿಷ್ಠಾಪಿಸಿರುವ ಮೂರ್ತಿಗಳ ವಿಸರ್ಜನೆ ಆಗುತ್ತವೆ. ಗಣೇಶ ವಿಸರ್ಜನೆ ಸಂದರ್ಭದಲ್ಲಿ ಅವಘಡಗಳು ನಡೆದು ಸಾವುಗಳಾಗುವ ವರದಿಗಳು ಸಾಮಾನ್ಯ ಎಂಬಂತಾಗಿವೆ. ಆದರೂ ಆಯೋಜಕರು ಈ ಸಂಬಂಧ ಕಟ್ಟುನಿಟ್ಟಿನ ಮುಂಜಾಗ್ರತೆ ಕ್ರಮಗಳನ್ನು ವಹಿಸುತ್ತಿಲ್ಲ ಎಂಬುದು ದುರದೃಷ್ಟಕರ.