ಬೆಂಗಳೂರು: ಆರಂಭಿಕ ದೇವದತ್ ಪಡಿಕ್ಕಲ್ ಮತ್ತು ಕರಣ್ ನಾಯರ್ ಅವರ ಅಜೇಯ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ 55 ರನ್ ಗಳಿಂದ ಮುಂಬೈ ತಂಡವನ್ನು ಸೋಲಿಸಿ ವಿಜಯ್ ಹಜಾರೆ ಟ್ರೋಫಿಯಲ್ಲಿ ಸೆಮಿಫೈನಲ್ ಪ್ರವೇಶಿಸಿದೆ.
ಬೆಂಗಳೂರಿನಲ್ಲಿ ಸೋಮವಾರ ನಡೆದ ಮೊದಲ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡ 50 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 254 ರನ್ ಕಲೆಹಾಕಿತ್ತು. ಕರ್ನಾಟಕ ತಂಡ 33 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 187 ರನ್ ಗಳಿಸಿದ್ದಾಗ ಸುರಿದ ಮಳೆ ಹಾಗೂ ದಟ್ಟ ಮಂದ ಬೆಳಕಿನ ಕಾರಣ ಪಂದ್ಯಕ್ಕೆ ಅಡ್ಡಿಯುಂಟಾಯಿತು. ಈ ವೇಳೆ ಕರ್ನಾಟಕ 55 ರನ್ ಗಳಿಂದ ಮುಂದೆ ಇದ್ದಿದ್ದರಿಂದ ಡಕ್ ವರ್ತ್ ಲೂಯಿಸ್ ನಿಯಮದಡಿ ಜಯ ಸಾಧಿಸಿದೆ ಎಂದು ಘೋಷಿಸಲಾಯಿತು.
ಕರ್ನಾಟಕ ತಂಡ ನಾಯಕ ಮಯಂಕ್ ಅಗರ್ವಾಲ್ (12) ವಿಕೆಟ್ ಬೇಗನೇ ಕಳೆದುಕೊಂಡಿತು. ಆದರೆ ಅದ್ಭುತ ಫಾರ್ಮ್ ನಲ್ಲಿರುವ ದೇವದತ್ ಪಡಿಕ್ಕಲ್ ಮತ್ತು ಕರಣ್ ನಾಯರ್ ಎರಡನೇ ವಿಕೆಟ್ ಗೆ ಮುರಿಯದ 143 ರನ್ ಭಾಗಿದಾರಿ ನಡೆಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು.
ಪಡಿಕ್ಕಲ್ 95 ಎಸೆತಗಳಲ್ಲಿ 11 ಬೌಂಡರಿ ಒಳಗೊಂಡ 81 ರನ್ ಬಾರಿಸಿ ಔಟಾಗದೇ ಉಳಿದರೆ, ಕರಣ್ ನಾಯರ್ 80 ಎಸೆತಗಳಲ್ಲಿ 11 ಬೌಂಡರಿ ಸಹಾಯದಿಂದ 74 ರನ್ ಗಳಿಸಿ ಅಜೇಯರಾಗಿ ಉಳಿದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಮುಂಬೈ ತಂಡ ಮಧ್ಯಮ ಕ್ರ,ಮಾಂಕದಲ್ಲಿ ಶ್ಯಾಮ್ಸ್ ಮುಲಾನಿ ಅವರ 86 ರನ್ ನೆರವಿನಿಂದ ಪೈಪೋಟಿಯ ಮೊತ್ತ ಕಲೆ ಹಾಕಿತು. ಸರ್ಫರಾಜ್ ಖಾನ್ ಗಾಯಗೊಂಡು ಹೊರಗುಳಿದಿದ್ದರು.
ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಕಳೆಗುಂದಿದ ಮುಂಬೈ ತಂಡಕ್ಕೆ ಮುಲಾನಿ 91 ಎಸೆತಗಳಲ್ಲಿ 8 ಬೌಂಡರಿ ಸೇರಿದ 86 ರನ್ ಬಾರಿಸಿ ನೆರವಾದರು. ಉಳಿದಂತೆ ಸಿರಾಜ್ ಪಾಟೀಲ್ (33), ಸಿದ್ದೇಶ್ ಲಾಡ್ (38), ಅಂಗರೀಕ್ಷ್ ರಘುವಂಶಿ (27) ಮತ್ತು ಇಶಾನ್ (20) ತಕ್ಕಮಟ್ಟಿಗೆ ರನ್ ಗಳಿಸಿದರು.
ಕರ್ನಾಟಕದ ಪರ ವಿದ್ಯಾಧರ್ ಪಾಟೀಲ್ 3, ವಿದ್ವತ್ ಕಾರ್ಯಪ್ಪ ಮತ್ತು ಅಭಿಲಾಷ್ ಶೆಟ್ಟಿ ತಲಾ 2 ವಿಕೆಟ್ ಗಳಿಸಿದರು.


