ಎಲ್ಲಾ ವಿಭಾಗದಲ್ಲೂ ಮೊದಲ ಬಾರಿ ಮುಗ್ಗರಿಸಿದ ಕರ್ನಾಟಕ ತಂಡ 7 ವಿಕೆಟ್ ಗಳಿಂದ ಮಧ್ಯಪ್ರದೇಶ ವಿರುದ್ಧ ಸೋಲು ಅನುಭವಿಸಿದೆ. ಈ ಮೂಲಕ ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ಮೊದಲ ಬಾರಿ ಸೋಲಿನ ರುಚಿ ನೋಡಿದೆ.
ಅಹಮದಾಬಾದ್ ನಲ್ಲಿ ಗುರುವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡ ಶಿವಾಂಗ್ ಕುಮಾರ್ ಮಾರಕ ದಾಳಿಗೆ ತತ್ತರಿಸಿ 47.4 ಓವರ್ ಗಳಲ್ಲಿ 207 ರನ್ ಗಳಿಗೆ ಆಲೌಟಾಯಿತು. ಟೂರ್ನಿಯಲ್ಲಿ ಕರ್ನಾಟಕ ದಾಖಲಿಸಿದ ಕಳಪೆ ಮೊತ್ತ ಇದಾಗಿದೆ.
ಸುಲಭ ಗುರಿ ಬೆಂಬತ್ತಿದ ಮಧ್ಯಪ್ರದೇಶ ತಂಡ ನಾಯಕ ವೆಂಕಟೇಶ್ ಅಯ್ಯರ್ ಅರ್ಧತಕದ ನೆರವಿನಿಂದ 23.2 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ಯಶ್ ದುಬೆ (40) ಮತ್ತು ಹಿಮಾಂಶು ಮಂತ್ರಿ (34) ಮೊದಲ ವಿಕೆಟ್ ಗೆ 78 ರನ್ ಜೊತೆಯಾಟ ನಿಭಾಯಿಸಿ ಉತ್ತಮ ಆರಂಭ ಒದಗಿಸಿದರು. ನಂತರ ಬಂದ ವೆಂಕಟೇಶ್ ಅಯ್ಯರ್ 33 ಎಸೆತಗಳಲ್ಲಿ 4 ಬೌಂಡರಿ ಮತ್ತು 5 ಸಿಕ್ಸರ್ ನೆರವಿನಿಂದ ಅಜೇಯ 65 ರನ್ ಸಿಡಿಸಿ ತಂಡಕ್ಕೆ ಬೇಗನೇ ಗೆಲುವು ತಂದುಕೊಟ್ಟರು.
ಅಕ್ಷತ್ ರಘುವಂಶಿ (26) ಮತ್ತು ಟ್ರಿಪುರೇಶ್ ಸಿಂಗ್ (36 ರನ್, 12 ಎಸೆತ, 3 ಬೌಂಡರಿ, 3 ಸಿಕ್ಸರ್) ಉತ್ತಮ ಬೆಂಬಲ ನೀಡಿದರು. ಕರ್ನಾಟಕದ ಬೌಲಿಂಗ್ ದುರ್ಬಲವಾಗಿದ್ದು, ಶ್ರೀಶಾ ಆಚಾರ್, ವಿದ್ಯಾಧರ್ ಪಾಟೀಲ್ ಮತ್ತು ಶ್ರೇಯಸ್ ಗೋಪಾಲ್ ತಲಾ 1 ವಿಕೆಟ್ ಪಡೆದರು.
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಕರ್ನಾಟಕ ತಂಡ ಭರ್ಜರಿ ಫಾರ್ಮ್ ನಲ್ಲಿರುವ ದೇವದತ್ ಪಡಿಕ್ಕಲ್ (35) ಮತ್ತು ಮಯಾಂಕ್ ಅಗರ್ವಾಲ್ (49)ಮೊದಲ ವಿಕೆಟ್ ಗೆ 77 ರನ್ ಜೊತೆಯಾಟದಿಂದ ಉತ್ತಮ ಆರಂಭ ಒದಗಿಸಿದರು. ಆದರೆ ಇಬ್ಬರನ್ನೂ ಬೇಗನೇ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ನಂತರ ಬಂದ ಬ್ಯಾಟ್ಸ್ ಮನ್ ಗಳು ಶಿವಾಂಗ್ ಕುಮಾರ್ ದಾಳಿಗೆ ತತ್ತರಿಸಿ ಅಲ್ಪ ಮೊತ್ತಕ್ಕೆ ಕುಸಿದಿದ್ದರಿಂದ ಪೈಪೋಟಿಯ ಮೊತ್ತ ಪೇರಿಸುವಲ್ಲಿ ಎಡವಿತು. ಶಿವಾಂಗ್ ಕುಮಾರ್ 45 ರನ್ ನೀಡಿ 5 ವಿಕೆಟ್ ಪಡೆದು ಮಿಂಚಿದರು.


