ಬೆಂಗಳೂರಿನ ನಾಗರಭಾವಿ 2 ನೇ ಹಂತದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಬಟ್ಟೆ ಬದಲಾಯಿಸುತ್ತಿರುವ ವೀಡಿಯೊ ರೆಕಾರ್ಡ್ ಮಾಡಿದ್ದ ಟೆಕ್ನಿಷಿಯನ್ ಒಬ್ಬನನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ಬಂಧಿಸಿದ್ದಾರೆ.
ಆಸ್ಪತ್ರೆಯ ಡ್ರೆಸ್ಸಿಂಗ್ ಕೋಣೆಯಲ್ಲಿ ಮೊಬೈಲ್ ಫೋನ್ ಇಟ್ಟಿದ್ದ ಆರೋಪಿ ಸುವೇಂದು ಮೋಹತ (23) ಪಶ್ಚಿಮ ಬಂಗಾಳದವನಾಗಿದ್ದು, ಒಂದು ವರ್ಷದಿಂದ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಕೊಟ್ಟಿಗೆಪಾಳ್ಯದ ಪೇಯಿಂಗ್ ಗೆಸ್ಟ್ ವಸತಿಗೃಹದಲ್ಲಿ ವಾಸವಿದ್ದ.
ಡಿಸೆಂಬರ್ 20 ರಂದು ಬೆಳಿಗ್ಗೆ ಶಸ್ತ್ರಚಿಕಿತ್ಸಾ ಘಟಕದ ಡ್ರೆಸ್ಸಿಂಗ್ ಕೋಣೆಯಲ್ಲಿ ನರ್ಸ್ ಬಟ್ಟೆ ಬದಲಾಯಿಸುತ್ತಿದ್ದಾಗ ಕೋಣೆಯ ಮೂಲೆಯಿಂದ ಶಬ್ದ ಕೇಳಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪರಿಶೀಲಿಸಿದಾಗ ರಹಸ್ಯವಾಗಿ ವೀಡಿಯೊ ರೆಕಾರ್ಡ್ ಮಾಡುತ್ತಿದ್ದ ಮೊಬೈಲ್ ಆಕೆಗೆ ಸಿಕ್ಕಿದೆ.
ಆಕೆ ಆಸ್ಪತ್ರೆ ಆಡಳಿತ ಮಂಡಳಿಗೆ ಮಾಹಿತಿ ನೀಡಿ ಪೊಲೀಸ್ ದೂರು ದಾಖಲಿಸಿದ್ದಾರೆ. ಆರೋಪಿಯನ್ನು ಪೊಲೀಸರು ಬಂಧಿಸಿ ತನಿಕೆ ನಡೆಸಿದಾಗ ಮೊಬೈಲ್‌ನಲ್ಲಿ ಒಂದು ವೀಡಿಯೊ ಮಾತ್ರ ಪತ್ತೆಯಾಗಿದೆ. ರೀಟ್ರೈವ್ ಮಾಡಲು ಮೊಬೈಲ್ ಅನ್ನು ವಿಧಿವಿಜ್ಞಾನ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.


