ಧರ್ಮ ಹಾಗೂ ಸಮುದಾಯಗಳ ಮಧ್ಯೆ ದ್ವೇಷ ಹರಡುವ ವೀಡಿಯೊ ಪೋಸ್ಟ್ ಮಾಡಿದ ಆರೋಪದಲ್ಲಿ ಯಾದಗಿರಿ ನಗರದ ನಿವಾಸಿ ಜಾಫರ್ ಖಾನ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕಲ್ಮಾ ಪಠಣಕ್ಕೆ ಸಂಬಂಧಿಸಿದ ಬರಹ ಇತ್ತು ಎನ್ನಲಾದ ಕರಪತ್ರಗಳನ್ನು ಕೆಲವರು ಕಾಲಿನಿಂದ ಒದೆಯುತ್ತಿರುವ ವೀಡಿಯೊ ಪೋಸ್ಟ್ ಮಾಡಿದ್ದ ಆರೋಪಿಯು, ‘ಕಲ್ಮಾಗೆ ಅವಮಾನ ಮಾಡಿದರೆ ನಾನು ಜೀವ ಕೊಡುವುದಕ್ಕೂ ಸಿದ್ಧನಿದ್ದೇನೆ. ಜೀವ ತೆಗೆಯಲೂ ಸಿದ್ಧನಿದ್ದೇನೆ ಎಂದು ಹೇಳಿದ್ದ. ನಮ್ಮವರೇ ಆದರೇನು, ಬೇರೆಯವರು ಆದರೇನು, ಜಗತ್ತಿನಲ್ಲಿ ಬೇರೆ ಯಾರ ಜೊತೆಗೆ ಬೇಕಾದರೂ ಪ್ರತೀಕಾರ ತೆಗೆದುಕೊಳ್ಳಿ. ಆದರೆ ಕಲ್ಮಾ ಜೊತೆ ಅಲ್ಲ, ಕಲ್ಮಾಗೆ ಅವಮಾನ ಮಾಡಿ ದರೆ ಜೀವ ತೆಗೆಯಲು ಸಿದ್ಧ ಎಂದು ಆರೋಪಿ ವೀಡಿಯೊದಲ್ಲಿ ಹೇಳಿದ್ದ. ಆತನ ವಿರುದ್ಧ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಾರತ- ಪಾಕ್ ಮಧ್ಯೆ ಉದ್ವಿಗ್ನತೆ ಸೃಷ್ಟಿಯಾದ ಬಳಿಕ ಇಂಥ ಪ್ರಚೋದನಕಾರಿ ಪ್ರಕರಣಗಳು ಕೆಲವೆಡೆ ವರದಿಯಾಗಿವೆ. ಬೆಂಗಳೂರಿನ ವೈಟ್‌ಫೀಲ್ಡ್‌ನಲ್ಲಿರುವ ಪಿಜಿಯಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಛತ್ತೀಸ್‌ಗಢ ಮೂಲದ ಶುಭಾಂಶು ಶುಕ್ಲಾ ಎಂಬ ಟೆಕ್ಕಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಬೆಳಾಲು ನಿವಾಸಿ ರೇಷ್ಮಾ ಎಂಬ ವಿದ್ಯಾರ್ಥಿನಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಹ್ಯಾಷ್ ಟ್ಯಾಗ್ “ಧಿಕ್ಕಾರ ಆಪರೇಷನ್ ಸಿಂದೂರ್” ಎಂಬ ಪೋಸ್ಟ್ ಹಾಕಿದ್ದಳು. ವ್ಯಾಪಕ ವಿರೋಧ ವ್ಯಕ್ತವಾದ ಬಳಿಕ ಡಿಲಿಟ್ ಮಾಡಿದ್ದಳು. ನಿಟ್ಟೆಯ ಇಂಜಿನಿಯರಿಂಗ್ ಕಾಲೇಜಿನ ವಸತಿ ನಿಲಯದ ಗೋಡೆಯ ಮೇಲೆ ವಿದ್ಯಾರ್ಥಿನಿ “ಹಿಂದೂಸ್ಥಾನ್ ನಹಿ ಮುಸ್ಲಿಂಸ್ಥಾನ ಬೋಲ್”, “ಮುಸ್ಲಿಂ ಜಿಂದಾಬಾದ್ ಹಿಂದೂ ಫಕ್ ಆಫ್” ಎಂದು ಬರೆದಿರುವುದು ವರದಿಯಾಗಿತ್ತು. ಆಕೆಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮನೆ ಮೇಲೆ ಮೊದಲು ಬಾಂಬ್ ಹಾಕಿ ಎಂಬ ವೀಡಿಯೊ ವೈರಲ್ ಮಾಡಿದ್ದ ಯುವಕನನ್ನು ಬೆಂಗಳೂರಿನಲ್ಲಿ ಬಂಡೆಪಾಳ್ಯ ಪೊಲೀಸರು ಬಂಧಿಸಿದ್ದರು.
ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಜಾವೀದ್ ಎಂಬ ಯುವಕ, ಪ್ರಧಾನಿ ಮೋದಿಯವರು ಇಮ್ರಾನ್ ಖಾನ್ ಕಾಲು ಹಿಡಿಯುತ್ತಿರುವ ಮತ್ತು ಶೂ ಬಿಚ್ಚುವ ರೀತಿ ಎಐ ತಂತ್ರಜ್ಞಾನ ಮೂಲಕ ಎಡಿಟ್ ಮಾಡಿ ಫೋಟೊ ಕ್ರಿಯೇಟ್ ಮಾಡಿಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. ಆತನನ್ನೂ ಪೊಲೀಸರು ಬಂಧಿಸಿದ್ದಾರೆ.