ಕೊಪ್ಪಳದ ಯುವತಿಯೊಬ್ಬಳು ರಾಯಚೂರಿನಲ್ಲಿ ನಡೆಯಬೇಕಿದ್ದ ಅದ್ಧೂರಿ ಮದುವೆಯೊಂದನ್ನು ತಡೆದಿದ್ದು, ಪ್ರಕರಣ ಪೊಲೀಸ್ ಠಾಣೆಗೆ ತಲುಪಿದೆ. ಪ್ರೀತಿಸಿ, ದೈಹಿಕ ಸಂಪರ್ಕ ಬೆಳೆಸಿ, ಗರ್ಭಪಾತ ಮಾಡಿಸಿದ ಯುವಕ ಈಗ ಬೇರೊಬ್ಬ ಯುವತಿಯನ್ನು ಮದುವೆಯಾಗಲು ಸಿದ್ಧತೆ ನಡೆಸಿರುವುದಾಗಿ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾಳೆ.
ಪ್ರೀತಿಸಿ ದೈಹಿಕ ಸಂಪರ್ಕ ಬೆಳೆಸಿ ನಂತರ ಮದುವೆಯ ನಾಟಕವಾಡಿ ಮೋಸ ಮಾಡಿದ್ದಾಗಿ ಯುವತಿ ಆರೋಪಿಸಿದ್ದಾಳೆ. ರಾಯಚೂರಿನ ರಿಷಬ್ ಎಂಬಾತನ ವಿರುದ್ಧ ಕೊಲ್ಲಳದ ಯುವತಿ ಈ ದೂರು ನೀಡಿದ್ದು, ಬಳ್ಳಾರಿಯಲ್ಲಿ ಓದುತ್ತಿದ್ದ ವೇಳೆ ಇಬ್ಬರಿಗೂ ಪರಿಚಯವಾಗಿದೆ. ಬಳಿಕ ಪ್ರೀತಿಯ ಹೆಸರಿನಲ್ಲಿ ಸಂಪರ್ಕ ಬೆಳೆಸಿ ಗರ್ಭಿಣಿಯಾದಾಗ ಅಬಾರ್ಷನ್ ಮಾಡಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ರಿಷಬ್ ದೇವಸ್ಥಾನವೊಂದರಲ್ಲಿ ಸಂತ್ರಸ್ತೆಯನ್ನು ಮದುವೆಯಾಗಿ ಬಳಿಕ ಆಕೆಯನ್ನು ಕಡೆಗಣಿಸಿ ಬೇರೊಂದು ಯುವತಿ ಜೊತೆ ಮದುವೆಯಾಗಲು ಸಿದ್ಧತೆ ನಡೆಸಿದ್ದಾನೆ. ರಾಯಚೂರು ನಗರದಲ್ಲಿ ಮತ್ತೊಂದು ಯುವತಿಯೊಂದಿಗೆ ಮದುವೆಯಾಗಲು ಸಿದ್ಧತೆ ಮಾಡಿಕೊಂಡಿದ್ದ. ಈತನ ಮದುವೆಯ ಆಮಂತ್ರಣ ಪತ್ರಿಕೆಯು ಇನ್ಸ್ಟಾಗ್ರಾಂ ಮೂಲಕ ಸಂತ್ರಸ್ತೆಗೆ ಸಿಕ್ಕಿದೆ. ಹೀಗಾಗಿ ಆಕೆ ನೇರವಾಗಿ ರಾಯಚೂರಿನಲ್ಲಿ ಮದುವೆ ನಡೆಯುವ ಸ್ಥಳಕ್ಕೆ ಬಂದಿದ್ದಾಳೆ.
ತನಗೆ ಆದ ಅನ್ಯಾಯವನ್ನು ಕುಟುಂಬದ ಸದಸ್ಯರು ಹಾಗೂ ನೆರೆದಿದ್ದ ಅತಿಥಿಗಳ ಮುಂದೆ ಹೇಳಿದ್ದಾಳೆ. ಈ ಮದುವೆ ತಾತ್ಕಾಲಿಕವಾಗಿ ನಿಂತು ಹೋಗಿದೆ. ಮಧ್ಯ ಪ್ರವೇಶಿಸಿದ ಸ್ಥಳೀಯರು ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಗೆ ಸಲ್ಲಿಸಿದ್ದಾರೆ. ಸಂತ್ರಸ್ತ ಯುವತಿಯ ದೂರಿನಂತೆ ರಿಷಬ್ ವಿರುದ್ಧ ಲವ್, ಸೆಕ್ಸ್, ಮ್ಯಾರೇಜ್ ದೋಖಾ ಆರೋಪದಡಿ ಎಫ್ಐಆರ್ ದಾಖಲಾಗಿದೆ. ನಂಬಿಸಿ, ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ.


