ಮುಂಬೈ: ಅನಾರೋಗ್ಯದಿಂದ ಚೇತರಿಸಿಕೊಂಡಿದ್ದ ಬಾಲಿವುಡ್ ಹಿರಿಯ ನಟ ಧರ್ಮೆಂದ್ರ ನಿಧನರಾಗಿದ್ದಾರೆ. ಅವರಿಗೆ 89 ವರ್ಷ ವಯಸ್ಸಾಗಿತ್ತು.
ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ಧರ್ಮೆಂದ್ರ ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ನಂತರ ಚೇತರಿಸಿಕೊಂಡು ಮರಳಿದ್ದ ಧರ್ಮೆಂದ್ರ ಅವರ ಆರೋಗ್ಯ ಸ್ಥಿತಿ ಸೋಮವಾರ ಬೆಳಿಗ್ಗೆ ದಿಢೀರನೆ ಹದಗೆಟ್ಟಿತ್ತು.
ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಶೋಲೆ, ಅನ್ಬವರ್, ಬಂದಿನಿ, ಅನುಪಮ, ಧರಮ್ ವೀರ್, ಚುಪ್ಕೆ ಚುಪ್ಕೆ, ಡ್ರೀಮ್ ಗರ್ಲ್ ಸೇರಿದಂತೆ ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಧರ್ಮೆಂದ್ರ ಇಸ್ಕಿನ್ ಚಿತ್ರದಲ್ಲಿ ಕೊನೆಯ ಬಾರಿಗೆ ನಟಿಸಿದ್ದರು.
ಧರ್ಮೆಂದ್ರ ಅವರಿಗೆ ಹಲವು ಫಿಲ್ಮ್ ಫೇರ್ ಪ್ರಶಸ್ತಿ, 2012ರಲ್ಲಿ ಪದ್ಮಭೂಷಣ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಬಾಲಿವುಡ್ ನಲ್ಲಿ ಹೀಮ್ಯಾನ್ ಎಂದೇ ಅವರು ಖ್ಯಾತರಾಗಿದ್ದರು.
ವಿಲೇ ಪಾರ್ಲೆ ಸ್ಮಶಾನದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆಗಳು ನಡೆದಿದ್ದು, ಪತ್ನಿ ಹೇಮಮಾಲಿನಿ, ಪುತ್ರಿ ಇಶಾ ಡಿಯೊಲ್, ನಟ ಅಮೀರ್ ಖಾನ್, ಅಮಿತಾಭ್ ಬಚ್ಚನ್ ಸೇರಿದಂತೆ ಹಲವು ಗಣ್ಯರು ಅಂತಿಮ ದರ್ಶನಕ್ಕೆ ತೆರಳಿದ್ದಾರೆ.


