ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಅಧ್ಯಕ್ಷರಾಗಿ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಆಯ್ಕೆಯಾಗಿದ್ದಾರೆ. ಈ ಮೂಲಕ ಬ್ರಿಜೇಶ್ ಪಟೇಲ್ ಬಣಕ್ಕೆ ಮುಖಭಂಗವಾಗಿದೆ.
ಭಾನುವಾರ ನಡೆದ ಕೆಎಸ್ ಸಿಎ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಬಿ.ಕೆ.ವೆಂಕಟೇಶ್ ಪ್ರಸಾದ್ 191 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ.
20 ಸುತ್ತುಗಳ ಮತದಾನ ಎಣಿಕೆ ಪ್ರಕ್ರಿಯೆಯಲ್ಲಿ ವೆಂಕಟೇಶ್ ಪ್ರಸಾದ್ ಒಟ್ಟು 749 ಮತ ಗಳಿಸಿದರೆ, ಬ್ರಿಜೇಶ್ ಪಟೇಲ್ ಬಣದ ಕೆ.ಎನ್.ಶಾಂತಕುಮಾರ್ 558 ಮತ ಪಡೆದರು.
ವೆಂಕಟೇಶ್ ಪ್ರಸಾದ್ ಬಣದಲ್ಲಿದ್ದ ಮತ್ತೋರ್ವ ಮಾಜಿ ಕ್ರಿಕೆಟಿಗ ಸುಜಿತ್ ಸೋಮಸುಂದರ್ ಬಿ – ಉಪಾಧ್ಯಕ್ಷ, ಸಂತೋಷ್ ಮೆನನ್ – ಪ್ರಧಾನ ಕಾರ್ಯದರ್ಶಿ, ಬಿ.ಎನ್.ಮಧುಕರ್ – ಖಜಾಂಚಿ, ಬಿ.ಕೆ.ರವಿ – ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಒಟ್ಟು 1,315 ಮತಗಳ ಚಲಾವಣೆಯಾಗಿವೆ. 2013 ರಲ್ಲಿ 1,351 ಮತಗಳ ಚಲಾವಣೆಗೊಂಡಿದ್ದವು.
12 ವರ್ಷಗಳ ಬಳಿಕ ಮಾಜಿ ಕ್ರಿಕೆಟಿಗರ ಅಧಿಪತ್ಯ
ಈ ಹಿಂದೆ 2013-2016ರವರೆ ಅನಿಲ್ ಕುಂಬ್ಳೆ ಕೆಎಸ್‌ಸಿಎ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಪಾಧ್ಯಕ್ಷರಾಗಿ ವೆಂಕಟೇಶ್ ಪ್ರಸಾದ್ ಸೇವೆ ಸಲ್ಲಿಸಿದ್ದರು. ಅದೇ ಅವಧಿಯಲ್ಲಿ ಜಾವಗಲ್ ಶ್ರೀನಾಥ್ ಕಾರ್ಯದರ್ಶಿಯಾಗಿದ್ದರು. ಇದೀಗ ವೆಂಕಟೇಶ್ ಪ್ರಸಾದ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ 12 ವರ್ಷಗಳ ಬಳಿಕ ಮತ್ತೆ ಕೆಎಸ್‌ಸಿಎ ಆಡಳಿತಕ್ಕೆ ವಾಪಸ್ಸಾಗಿದ್ದಾರೆ. ಈ ಮಾಜಿ ಕ್ರಿಕೆಟಿಗರ ಮತ್ತೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಪ್ರತಿಕ್ರಿಯಿಸಿದ ವೆಂಕಟೇಶ್ ಪ್ರಸಾದ್, “ಕೆಎಸ್‌ಸಿಎ ಇತಿಹಾಸದಲ್ಲಿ ಈ ಗೆಲುವು ಹೊಸ ಅಧ್ಯಾಯವಾಗಲಿದೆ. ಸದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣದಿಂದ ಮಾಯವಾಗಿರುವ ಐಪಿಎಲ್ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಮತ್ತೆ ಮರಳಿಸಬೇಕಿದೆ. ಆ ನಿಟ್ಟಿನಲ್ಲಿ ಪ್ರಯತ್ನಿಸುವುದರ ಜೊತೆಗೆ ರಾಜ್ಯದಲ್ಲಿ ಕ್ರಿಕೆಟ್ ಅಭಿವೃದ್ಧಿಗಾಗಿ ಅಗತ್ಯ ಕೆಲಸಗಳನ್ನು ಕೈಗೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.


