ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವೆನೆಜುವೆಲಾದ ಮೇಲೆ ದಾಳಿ ನಡೆಸಿ ಅಲ್ಲಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆಹಿಡಿದ ಬಳಿಕ ಕೊಲಂಬಿಯಾ ಅಧ್ಯಕ್ಷರಿಗೆ ಎಚ್ಚರಿಕೆ ನೀಡಿದ್ದಾರೆ. ನಿಕೋಲಸ್ ಮಡುರೊ ಅವರನ್ನು ಬಂಧಿಸಿರುವ ಅಮೆರಿಕ ನ್ಯೂಯಾರ್ಕ್‌ನ ಜೈಲಿಗೆ ಹಾಕಿದೆ.
ಈಗ ಕೊಲಂಬಿಯಾ ಅಧ್ಯಕ್ಷ ಸ್ಟಾವೊ ಪೆಟ್ರೋ ಅವರಿಗೆ ಡೊನಾಲ್ಡ್ ಟ್ರಂಪ್, ನಿಮ್ಮ ಕಾರ್ಯವೈಖರಿ ನೋಡಿಕೊಳ್ಳಿ ಎಂದು ಹೇಳಿದ್ದಾರೆ. ಯುಎಸ್ ಕ್ರಮಗಳು ಲ್ಯಾಟಿನ್ ಅಮೆರಿಕದ ಸಾರ್ವಭೌಮತ್ವದ ಮೇಲಿನ ದಾಳಿ. ಅವು ಮಾನವೀಯ ಬಿಕ್ಕಟ್ಟಿಗೆ ಕಾರಣವಾಗುತ್ತದೆ ಎಂದು ವೆನೆಜುವೆಲಾ ಮೇಲಿನ ದಾಳಿ ಕುರಿತು ಕೊಲಂಬಿಯಾ ಅಧ್ಯಕ್ಷರು ಪ್ರತಿಕ್ರಿಯಿಸಿದ್ದರು. ಈ ಹೇಳಿಕೆಗೆ ಟ್ರಂಪ್, ಅವರು ಕೊಕೇನ್ ತಯಾರಿಸುತ್ತಿದ್ದಾರೆ. ಅದನ್ನು ಯುನೈಟೆಡ್ ಸ್ಟೇಟ್ಸ್‌ಗೆ ಕಳುಹಿಸುತ್ತಿದ್ದಾರೆ. ಆದ್ದರಿಂದ ಅವರು ತಮ್ಮ ಮಾದಕ ದ್ರವ್ಯಗಳ ಕಡೆಗೆ ನೋಡಿಕೊಳ್ಳಲಿ ಎಂದು ಪ್ರತಿಕ್ರಿಯಿಸಿದ್ದಾರೆ.
ಮಾದಕವಸ್ತು ಕಳ್ಳಸಾಗಣೆ ಹಡಗುಗಳ ವಿರುದ್ಧ ಕ್ರಮಕ್ಕೆ ಟ್ರಂಪ್ ಕೆರಿಬಿಯನ್‌ನಲ್ಲಿ ಆದೇಶಿಸಿ ಸೇನೆ ನಿಯೋಜಿಸಿರುವುದನ್ನು ಪೆಟ್ರೋ ಟೀಕಿಸಿದ್ದಾರೆ. ಮಾದಕವಸ್ತು ವಿರೋಧಿ ಕಾರ್ಯತಂತ್ರದ ಭಾಗವಾಗಿ ಕೊಲಂಬಿಯಾದಲ್ಲಿ ಮಾದಕವಸ್ತು ಉತ್ಪಾದನಾ ಘಟಕಗಳನ್ನು ಹೊಡೆದು ಹಾಕುವುದಾಗಿ ಟ್ರಂಪ್ ಇತ್ತೀಚೆಗೆ ಹೇಳಿದ್ದರು. ಇದನ್ನೂ ಪೆಟ್ರೋ ಖಂಡಿಸಿದ್ದಾರೆ.
ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಸೆರೆ ಹಿಡಿಯಲು ಅಮೆರಿಕ ನಡೆಸಿದ ವೈಮಾನಿಕ ದಾಳಿಯಲ್ಲಿ ನಾಗರಿಕರು ಮತ್ತು ಮಿಲಿಟರಿ ಸಿಬ್ಬಂದಿ ಸೇರಿದಂತೆ 40 ಜನ ಮೃತಪಟ್ಟಿದ್ದಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿ ತಿಳಿಸಿದ್ದಾರೆ.
ಸೆರೆಯಾದ ಮಡುರೊ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರ್ಸ್ ಅವರನ್ನು ಹೊತ್ತ ವಿಮಾನವು ನ್ಯೂಯಾರ್ಕ್‌ನ ಸ್ಟೀವರ್ಟ್ ಏರ್ ನ್ಯಾಷನಲ್ ಗಾರ್ಡ್ ಬೇಸ್‌ಗೆ ಬಂದಿಳಿದಿದೆ. ಮಾದಕವಸ್ತು ಭಯೋತ್ಪಾದನೆ ಮತ್ತು ಮಾದಕವಸ್ತು ಕಳ್ಳಸಾಗಣೆಗೆ ವೆನೆಜುವೆಲಾ ಸಹಕಾರ ನೀಡುತ್ತಿದೆ ಎಂದು ಟ್ರಂಪ್ ಆರೋಪಿಸುತ್ತಾರೆ. ವೆನೆಜುವೆಲಾ ರಷ್ಯಾ, ಚೀನಾ, ಇರಾನ್ ಜೊತೆ ಉತ್ತಮ ಸಂಪರ್ಕವನ್ನು ಹೊಂದಿರುವುದು ಕೂಡ ಅಮೆರಿಕಕ್ಕೆ ಇಷ್ಟವಾಗದ ವಿಚಾರ.


