ಆನ್‌ಲೈನ್ ಬೆಟ್ಟಿಂಗ್ ಆ್ಯಪ್ ಪ್ರಕರಣದಲ್ಲಿ ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ ಅವರನ್ನು ಮತ್ತೆ ನಾಲ್ಕು ದಿನ ಇಡಿ ವಶಕ್ಕೆ ನೀಡಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಅಕ್ರಮ ಬೆಟ್ಟಿಂಗ್ ಆರೋಪದಡಿ ವೀರೇಂದ್ರ ಪಪ್ಪಿ ಇಡಿ ವಶದಲ್ಲಿದ್ದರು, ಆದರೆ ಗುರುವಾರಕ್ಕೆ ಕಸ್ಟಡಿ ಅವಧಿ ಮುಗಿದಿತ್ತು, ಅವರನ್ನು ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಮುಂದೆ ಹಾಜರುಪಡಿಸಲಾಗಿತ್ತು.
ವಿಚಾರಣೆ ವೇಳೆ ಇ ಡಿ ಪರ ವಿಶೇಷ ಸರ್ಕಾರಿ ಅಭಿಯೋಜಕ ಐಎಸ್ ಪ್ರಮೋದ್ ಚಂದ್ರ ಆರೋಪಿ ವೀರೇಂದ್ರ ಅವರ ಕಸ್ಟಡಿ ಅವಧಿಯನ್ನು 15 ದಿನ ಮುಂದುವರಿಸಿ ಆದೇಶಿಸಬೇಕು ಎಂದು ಪೀಠಕ್ಕೆ ಮನವರಿಕೆ ಮಾಡಿಕೊಟ್ಟರು. ಪ್ರಕರಣದ ಹೆಚ್ಚಿನ ತನಿಖೆ ಸಲುವಾಗಿ ಆರೋಪಿಯನ್ನು ಮತ್ತೆ ವಶಕ್ಕೆ ನೀಡುವಂತೆ ಇಡಿ ಸಲ್ಲಿಸಿದ ಮನವಿ ಪುರಸ್ಕರಿಸಿದ ನ್ಯಾಯಾಲಯ, ನಾಲ್ಕು ದಿನ ಪಪ್ಪಿ ಅವರನ್ನು ವಶಕ್ಕೆ ನೀಡಿದೆ.
ವೀರೇಂದ್ರ ಪರ ವಾದಿಸಿದ ಹಿರಿಯ ವಕೀಲರಾದ ಎಚ್ ಎಸ್ ಚಂದ್ರಮೌಳಿ ಮತ್ತು ಕಿರಣ್ ಜವಳಿ ಅವರು ಈಗಾಗಲೇ ವೀರೇಂದ್ರ ಅವರು ತನಿಖೆಗೆ ಸಹಕರಿಸುತ್ತಿದ್ದಾರೆ. ಹೀಗಿರುವಾಗ ಅವರನ್ನು ಮತ್ತೆ ಕಸ್ಟಡಿಗೆ ಕೇಳುವುದು ಉಚಿತವಲ್ಲ ಎಂದು ವಾದಿಸಿದರು. ಅಂತಿಮವಾಗಿ ನ್ಯಾಯಾಧೀಶರು ಆರೋಪಿಯನ್ನು ಮತ್ತೆ ನಾಲ್ಕು ದಿನ ಇಡಿ ವಶಕ್ಕೆ ನೀಡ ಆದೇಶಿಸಿದರು.
ಪ್ರಕರಣ ಸಂಬಂಧ ಆ.23 ರಂದು ವೀರೇಂದ್ರ ಅವರನ್ನು ಇಡಿ ಬಂಧಿಸಿತ್ತು. ಇದಕ್ಕೂ ಮೊದಲು ಅವರ ಮನೆ, ಕಚೇರಿ ಹಾಗೂ ಸಂಬಂಧಿಕರ ಮನೆಗಳನ್ನು ಶೋಧಿಸಿತ್ತು. ಈ ವೇಳೆ ಐಷಾರಾಮಿ ಕಾರುಗಳು, ಕೆಜಿ ಗಟ್ಟಲೆ ಚಿನ್ನ ಹಾಗೂ ಕೋಟ್ಯಂತರ ನಗದು ಪತ್ತೆಯಾಗಿತ್ತು. ಬೆಟ್ಟಿಂಗ್ ಆ್ಯಪ್‌ಗಳಿಂದ ಕಡಿಮೆ ಅವಧಿಯಲ್ಲಿ 2000 ಕೋಟಿ ರೂ. ಲಾಭ ಗಳಿಸಿರುವುದು ತನಿಖೆ ವೇಳೆ ಪತ್ತೆಯಾಗಿರುವುದಾಗಿ ಇಡಿ ತಿಳಿಸಿದೆ.