Menu

ಬನಶಂಕರಿಯಲ್ಲಿ ಜೀವ ಪಣಕ್ಕಿಟ್ಟು ಜೇನುನೊಣ ದಾಳಿಯಿಂದ ತಾಯಿ ಮಗುವನ್ನು ರಕ್ಷಿಸಿದ ವೀರಕಪುತ್ರ ಶ್ರೀನಿವಾಸ

ಬೆಂಗಳೂರಿನ ಬನಶಂಕರಿಯ ಸುಚಿತ್ರ ಫಿಲ್ಮ್‌ ಸೊಸೈಟಿ ಬಳಿ ತಾಯಿ ಮಗುವಿನ ಮೇಲೆ ಜೇನುದಾಳಿ ನಡೆದಿದ್ದು, ವೀರಲೋಕ ಬುಕ್ಸ್’ ಸಂಸ್ಥೆಯ ಸ್ಥಾಪಕ ವೀರಕಪುತ್ರ ಶ್ರೀನಿವಾಸ ತಮ್ಮ ಜೀವದ ಹಂಗು ತೊರೆದು ಅವರಿಬ್ಬರನ್ನು ರಕ್ಷಿಸಿದ್ದಾರೆ.

ಈ ವೇಳೆ ಶ್ರೀನಿವಾಸ ಅವರೂ ಜೇನುದಾಳಿಯಿಂದ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ಮನೆಗೆ ಮರಳಿದ್ದಾರೆ. ಜೇನುದಾಳಿಯಿಂದ ತಾಯಿ ಮತ್ತು ಮಗು ತೀವ್ರ ಅಸ್ವಸ್ಥಗೊಂಡಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ.

ಘಟನೆಯ ಕುರಿತು ಶ್ರೀನಿವಾಸ ಅವರು ಸೋಷಿಯಲ್‌ ಮೀಡಿಯಾದಲ್ಲಿ  ಸಮಗ್ರವಾಗಿ ವಿಚಾರ ಹಂಚಿಕೊಂಡಿದ್ದಾರೆ.  ದೃಶ್ಯ ನೋಡಿ  ನಾನೂ ಹಾಗೇ ಇರಬಹುದಿತ್ತು. ಕಾರಿನ ಒಳಗಿದ್ದೆ. ಆದರೆ ಮಗಳು ನದಿಯ ನೆನಪು ಹಾಗೆ ಡಲಿಲ್ಲ. ಆ ಮಗು ಅಳುತ್ತಿದ್ದನ್ನು ನೋಡಿ ನನಗೆ ನನ್ನ ಮಗಳು ನದಿಯ ನೆನಪಾಗಿಬಿಟ್ಟಿತು ಎಂದು ಹೇಳಿಕೊಂಡಿದ್ದಾರೆ.

ಬನಶಂಕರಿಯ ಸುಚಿತ್ರಾ ಫಿಲ್ಮ್ ಸೊಸೈಟಿ ಬಳಿ ರಸ್ತೆಯಲ್ಲಿ ಹೋಗುತ್ತಿದ್ದ ತಾಯಿ ಮತ್ತು ಪುಟ್ಟ ಮಗುವಿನ ಮೇಲೆ ಸಾವಿರಾರು ಜೇನು ನೊಣಗಳು ದಾಳಿ ಮಾಡಿವೆ, ಶ್ರೀನಿವಾಸ ಹೇಳುವಂತೆ ಜೇನ್ನೊಣಗಳು ಮುತ್ತಿಕೊಂಡಿದ್ದ ಕಾರಣ ಆ ತಾಯಿ ಮಗು ಮನುಷ್ಯರಂತೆ ಕಾಣುತ್ತಿರಲಿಲ್ಲ, ರಸ್ತೆ ಮಧ್ಯೆ ಜೇನುಗೂಡು ನಿಂತಂತೆ ಕಾಣುತ್ತಿತ್ತು. ತಾಯಿ ತನ್ನ ಮಗುವನ್ನು ಕಾಂಗರೂ ರೀತಿ ಅಪ್ಪಿಕೊಂಡು, ಮಗುವಿಗೆ ಜೇನ್ನೊಣಗಳು ಕಚ್ಚದಂತೆ ತಾನು ಕಚ್ಚಿಸಿಕೊಂಡು ನೋವನ್ನು ಅನುಭವಿಸುತ್ತಾ ಕಿರುಚುತ್ತಿದ್ದರು. ಆದರೆ ಯಾರೂ ಸಹಾಯಕ್ಕೆ ಮುಂದಾಗಲೇ ಇಲ್ಲ.

ಶ್ರೀನಿವಾಸ ಅವರು ಕಾರಿನಲ್ಲಿ ಹೋಗುತ್ತಿದ್ದಾಗ ಈ ದೃಶ್ಯ ಕಂಡು ಅವರ ಸೋದರ ನಾಗೇಶ್ ‘ಇಳಿ ಬೇಗ’ ಎಂದು ಕೂಗಿದ್ದಾರೆ, ಇಳಿದಾಗ ತಕ್ಷಣ ಏನಾಗುತ್ತಿದೆ ಗೊತ್ತಾಗದೆ ತಡವರಿಸಿದ ಶ್ರೀನಿವಾಸ ತಾಯಿ-ಮಗಳ ಮೇಲೆ ಹೆಜ್ಜೇನು ದಾಳಿ ಆಗುತ್ತಿರುವುದು ತಿಳಿದಾಗ ಹಿಂದೆ ಮುಂದೆ ಯೋಚಿಸದೆ ಕೈಯಲ್ಲಿದ್ದ ಒಂದು ಸಣ್ಣ ಬಟ್ಟೆಯನ್ನೇ ಎತ್ತಿಕೊಂಡು ಜೇನ್ನೊಣಗಳ ನಡುವೆ ತಾಯಿ ಮಗಳ ರಕ್ಷಣೆಗೆ ಹೋಗಿದ್ದರು. ಮೊದಲಿಗೆ ತಾಯಿ-ಮಗುವನ್ನು ಕರೆದುಕೊಂಡು ಶ್ರೀನಿವಾಸ್‌ ಸುಚಿತ್ರಾ ಫಿಲ್ಮ್ ಸೊಸೈಟಿಯ ಒಳಗೆ ಓಡಿದ್ದಾರೆ. ಅಲ್ಲಿನ ಶೌಚಾಲಯದ ಒಳಗೆ ಅವರನ್ನು ಕಳುಹಿಸಿ ಬಾಗಿಲು ಹಾಕಿ ರಕ್ಷಿಸಿದ್ದಾರೆ. ಅವರನ್ನು ರಕ್ಷಿಸುವ ಭರದಲ್ಲಿ ಹೊರಗಿದ್ದ ಶ್ರೀನಿವಾಸ್ ಮೇಲೆ ಜೇನುನೊಣಗಳು ದಾಳಿ ನಡೆಸಿವೆ. ಇಪ್ಪತ್ತಕ್ಕೂ ಹೆಚ್ಚು ಜೇನುಮುಳ್ಳುಗಳು ದೇಹಕ್ಕೆ ಚುಚ್ಚಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ್ದರು.

ತಾಯಿ ಮಗು  ಶೌಚಾಲಯದ ಒಳಗೆ ಹೋದಂತೆ ನಾನೂ ಹೋಗಿಬಿಡಬೇಕಿತ್ತು. ಲೇಡೀಸ್‌ ಟಾಯ್ಲೆಟ್‌ ಅಂದುಕೊಂಡು ಹೊರಗೆ ನಿಂತುಬಿಟ್ಟೆ. ಪಕ್ಕದಲ್ಲಿಯೇ ಇದ್ದಂತಹ ಪುರುಷರ ಶೌಚಾಲಯಕ್ಕೆ ಹೋಗಿದಿದ್ದರೆ ಏನೂ ಆಗುತ್ತಿರಲಿಲ್ಲ. ಆದರೆ ಅವರಿಗೆ ಸೂಚನೆ ಕೊಡುವ ಗುಂಗಿನಲ್ಲಿ ನನಗೆ ಹೊಳೆಯಲಿಲ್ಲ. ಜೇನು ನೊಣಗಳ ದಾಳಿಯಿಂದ ತಪ್ಪಿಸಿಕೊಳ್ಳಲು ಸುಚಿತ್ರಾ ಫಿಲ್ಮ್ ಸೊಸೈಟಿಯ ಬಯಲು ಸಭಾಂಗಣದತ್ತ ಓಡಲಾರಂಭಿಸಿದೆ. ಅವು ನನ್ನ ಮೇಲೆಯೇ ಹಾರುವಾಗ ಹುಚ್ಚನ ಹಾಗೆ ಕೈಗಳನ್ನು ಆಡಿಸ್ತಾ ರಕ್ಷಿಸಿಕೊಳ್ಳುತ್ತಿದ್ದರೆ ಅಲ್ಲಲ್ಲಿ ಕಿಟಿಕಿಗಳನ್ನು ತೆರೆದ ಜನರು ಆ ದೃಶ್ಯವನ್ನು ಗಾಬರಿಯಿಂದ ನೋಡುತ್ತಿದ್ದರು. “ಸುಖಗಳಲ್ಲಿ ಸಾವಿರ ಜನರಿದ್ದರೂ, ಕಷ್ಟಗಳಲ್ಲಿ ನಾವೊಬ್ಬರೇ ಇರ್ತೀವಿ” ಎಂಬ ಮಾತು ನಿಜವಾಯಿತು. ಇಷ್ಟೆಲ್ಲಾ ಆಗುತ್ತಿದ್ದರೂ ರಸ್ತೆಯಲ್ಲಿ ಯಾರೂ ನಿಲ್ಲಿಸಲಿಲ್ಲ. ಆ ರೋಡ್‌ ಜಾಮ್‌ ಆಗಿತ್ತು. ಯಾರೂ ಏನೂ ಮಾಡಲು ಮುಂದಾಗುತ್ತಿರಲಿಲ್ಲ. ನಾನೂ ಹಾಗೇ ಇರಬಹುದಿತ್ತು. ಕಾರಿನ ಒಳಗಿದ್ದೆ. ಆದರೆ ಮಗಳು ನದಿಯ ನೆನಪು ಹಾಗೆ ಡಲಿಲ್ಲ. ಆ ಮಗು ಅಳುತ್ತಿದ್ದನ್ನು ನೋಡಿ ನನಗೆ ನನ್ನ ಮಗಳು ನದಿಯ ನೆನಪಾಗಿಬಿಟ್ಟಿತು ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಕೊನೆಗೂ ಜೇನುನೊಣಗಳಿಂದ ತಪ್ಪಿಸಿಕೊಂಡು ಪುರುಷರ ಶೌಚಾಲಯದೊಳಗೆ ಹೋದೆ, ಅದಾಗಲೇ ಅಲ್ಲಿ ಕೆಲವರು ಸೇರಿಕೊಂಡಿದ್ದರು. ನನ್ನ ಮೊಬೈಲ್‌ ಕಾರಿನಲ್ಲೇ ಉಳಿದಿತ್ತು. ಪೊಲೀಸರಿಗೆ, ಆಂಬ್ಯುಲೆನ್ಸಿಗೆ ತಿಳಿಸೋಣ ಎಂದು ಅಲ್ಲಿದ್ದವರಲ್ಲಿ ಕೇಳಿದರೆ ಒಬ್ಬರೂ ಫೋನ್‌ ಮಾಡಲು ತಯಾರಿರಲಿಲ್ಲ. ಕೊನೆಗೆ ಮೊಬೈಲ್‌ ಪಡೆದು ಪೊಲೀಸ್‌ , ಆಂಬ್ಯುಲೆನ್ಸಿಗೆ ಕರೆ ಮಾಡಿ ಆ ತಾಯಿ ಮಗುವನ್ನು ಆಸ್ಪತ್ರೆಗೆ ಕಳಿಸಿ, ನಾನೂ ಅದೇ ಆಸ್ಪತ್ರೆಗೆ ಹೋದೆ. ಚಿಕಿತ್ಸೆ ಪಡೆದುಕೊಂಡೆ. ಧೈರ್ಯವಾಗಿರಿ ಎಂದು ಆ ಮಹಿಳೆಗೆ ಹೇಳಿದಾಗ, ಸರ್‌, ನಾನು ಬದುಕ್ತೀನಲ್ಲ? ನನ್ನ ಮಗಳ ಜೊತೆಗಿರ್ತೀನಲ್ವಾ… ಅಂತ ಕೇಳಿದರು. ಮಲಗಿದ್ದ ಜಾಗದಿಂದಲೇ ಕೈ ಎತ್ತಿ ಕಾಪಾಡಿದ್ದಕ್ಕೆ ಥ್ಯಾಂಕ್ಯೂ ಸರ್‌ ಅಂದರು ಎಂಬುದಾಗಿ ಶ್ರೀನಿವಾಸ ಇಡೀ ಘಟನೆಯ ವಿವರಗಳನ್ನು ದಾಖಲಿಸಿದ್ದಾರೆ.

ಆ ದಾರಿಯಲ್ಲಿ ಐವತ್ತು ಜನರ ಮೇಲೆ ಜೇನ್ನೊಣಗಳು ದಾಳಿ ಮಾಡಿವೆ. ಸುಚಿತ್ರಾ ಫಿಲ ಸೊಸೈಟಿಯಲ್ಲಿ ನಿರಂತರ ಕಾರ್ಯಕ್ರಮ ನಡೆಯುತ್ತವೆ, ಅಲ್ಲಿಗೆ ಜನ ಬರುವಾಗ ಹೀಗೆ ದಾಳಿಯಾದರೆ ಏನಾಗಬಹುದು, ಬಿಬಿಎಂಪಿ ಇದಕ್ಕೊಂದು ಪರಿಹಾರ ಕಂಡುಕೊಳ್ಳಲಿ. ಪೊಲೀಸರೂ ಸಂದರ್ಭದಲ್ಲಿ ಏನು ಮಾಡಬೇಕು ಅನ್ನೋ ತರಬೇತಿ ಹೊಂದಿರಲಿ ಎಂದು ಶ್ರೀನಿವಾಸ್‌ ಹೇಳಿದ್ದಾರೆ.

Related Posts

Leave a Reply

Your email address will not be published. Required fields are marked *