Menu

ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ ಕನ್ನಡತಿ ವೇದಾ ಕೃಷ್ಣಮೂರ್ತಿ

veda krishnamurthy

ಬೆಂಗಳೂರು: ಭಾರತ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ತಾರೆ ಕನ್ನಡತಿ ವೇದಾ ಕೃಷ್ಣಮೂರ್ತಿ ವೃತ್ತಿಪರ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರಿನ 32 ವರ್ಷದ ವೇದಾ ಕೃಷ್ಣಮೂರ್ತಿ ಶುಕ್ರವಾರ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ನಿಂದ ನಿವೃತ್ತಿ ಘೋಷಿಸಿದ್ದಾರೆ.

ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ವೇದಾ ಕೃಷ್ಣಮೂರ್ತಿ, ಭಾವನಾತ್ಮಕ ಪೋಸ್ಟ್ ನಲ್ಲಿ ಕಡೂರು ಎಂಬ ಗ್ರಾಮೀಣ ಪ್ರದೇಶದಿಂದ ಭಾರತ ತಂಡದ ಜೆರ್ಸಿ ಧರಿಸಬೇಕು ಎಂ ದೊಡ್ಡ ಕನಸು ಹೊತ್ತು ಬಂದ ನನಗೆ ಎಲ್ಲರೂ ಬೆಂಬಲ ನೀಡಿದ್ದೀರಿ. ಕ್ರಿಕೆಟ್ ನನಗೆ ಸಂತೋಷ, ಉದ್ದೇಶ, ನೋವು, ಕುಟುಂಬ ಎಲ್ಲವನ್ನೂ ನೀಡಿದೆ. ಎಲ್ಲವನ್ನೂ ನೀಡಿದ ಕ್ರಿಕೆಟ್ ಗೆ ವಿದಾಯ ಹೇಳುವ ಸಮಯ ಬಂದಿದೆ ಎಂದು ಹೇಳಿಕೊಂಡಿದ್ದಾರೆ.

ಭಾರತ ತಂಡದ ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟ್ಸ್ ಮನ್ ಆಗಿದ್ದ ವೇದಾ ಕೃಷ್ಣ ಮೂರ್ತಿ 2017ರ ವಿಶ್ವಕಪ್ ಫೈನಲ್ ತಲುಪಿದ ಭಾರತ ತಂಡವನ್ನು ಪ್ರತಿನಿಧಿಸಿದ್ದರು.

2011ರಿಂದ 2020ರ ವರೆಗಿನ 11 ವರ್ಷಗಳ ವೃತ್ತಿ ಬದುಕಿನಲ್ಲಿ 124 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 48 ಏಕದಿನ ಮತ್ತು 76 ಟಿ-20 ಪಂದ್ಯಗಳಾಗಿವೆ. ಏಕದಿನದಲ್ಲಿ 829 ರನ್ ಗಳಿಸಿದರೆ, ಟಿ-20ಯಲ್ಲಿ 875 ರನ್ ಬಾರಿಸಿದ್ದಾರೆ.

18ನೇ ವಯಸ್ಸಿಗೆ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ವೇದಾ ಕೃಷ್ಣಮೂರ್ತಿ, ಇಂಗ್ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಅರ್ಧಶತಕ (51) ಬಾರಿಸಿ ಗಮನ ಸೆಳೆದಿದ್ದರು. 2017ರ ಏಕದಿನ ವಿಶ್ವಕಪ್ ಸೆಮಿಫೈನಲ್ ನಲ್ಲಿ 45 ಎಸೆತಗಳಲ್ಲಿ 70 ರನ್ ಸಿಡಿಸಿದ್ದರು.

Related Posts

Leave a Reply

Your email address will not be published. Required fields are marked *