Menu

ವಿಬಿ ಜಿ ರಾಮ್ ಜಿ ಕರಾಳ ಕಾಯ್ದೆ ರದ್ದು ಮಾಡುವವರೆಗೆ ಹೋರಾಟ: ಸಚಿವ ಬೈರತಿ ಸುರೇಶ್

byrati

ಕೋಲಾರ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನರೆಗಾ ಯೋಜನೆಯನ್ನು ಮಾರ್ಪಾಡು ಮಾಡಿ, ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆದು ಹಾಕಿ ಗ್ರಾಮೀಣ ಭಾಗದ ಕೋಟ್ಯಂತರ ಬಡವರ ಅನ್ನ ಕಿತ್ತುಕೊಳ್ಳಲು ಸಂಚು ರೂಪಿಸಿದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಹಾಗೂ ಕೋಲಾರ ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ವಾಗ್ದಾಳಿ ನಡೆಸಿದ್ದಾರೆ.

ಹಿಂದಿನಂತೆ ಮನರೆಗಾ ಹೆಸರಿನಲ್ಲಿಯೇ ಯೋಜನೆ ಮುಂದುವರಿಯಬೇಕು. ಅಲ್ಲಿವರೆಗೆ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಹೋರಾಟ ಮಾಡಲಿದೆ ಎಂದು ಘೋಷಿಸಿದರು.

ಕೋಲಾರದಲ್ಲಿ ಶನಿವಾರ ಜಿಲ್ಲೆಯ ಕಾಂಗ್ರೆಸ್ ಶಾಸಕರೊಂದಿಗೆ ಮನರೆಗಾ ಉಳಿಸಿ ಅಭಿಯಾನದ ಅಂಗವಾಗಿ ಮಾಧ್ಯಮಗೋಷ್ಠಿ ನಡೆಸಿ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಗ್ರಾಮೀಣ ಪ್ರದೇಶದ ಕೋಟ್ಯಂತರ ಬಡವರಿಗಾಗಿ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಮನರೆಗಾ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಕಳೆದ 20 ವರ್ಷಗಳಿಂದ ಗ್ರಾಮೀಣ ಭಾಗದ ಕೂಲಿಕಾರರು, ರೈತರು, ಪರಿಶಿಷ್ಟ ವರ್ಗದವರು, ಮಹಿಳೆಯರು ಈ ಯೋಜನೆಯ ಸದುಪಯೋಗ ಪಡೆದುಕೊಂಡಿದ್ದರು ಎಂದರು.

ನಮ್ಮ ಕಾಂಗ್ರೆಸ್ ಸರ್ಕಾರ ಈ ವರ್ಗದ ಜನರಿಗೆ ಕೇಳಿ ಪಡೆದುಕೊಳ್ಳುವ ಹಕ್ಕನ್ನು ನೀಡಿತ್ತು. ಆದರೆ, ಬಿಜೆಪಿ ಸರ್ಕಾರ ಈ ಹಕ್ಕನ್ನು ಕಸಿದುಕೊಳ್ಳಲು ಹೊರಟಿದೆ ಎಂದು ಕಿಡಿ ಕಾರಿದರು.

ದೇಶದ ಕೋಟ್ಯಂತರ ಜನರು ಮತ್ತು ಪ್ರತಿಪಕ್ಷಗಳ ಅಭಿಪ್ರಾಯ ಪಡೆಯದೇ ಏಕಪಕ್ಷೀಯ ನಿರ್ಧಾರ ಕೈಗೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮೋದಿ ಸರ್ಕಾರ ಡಿಸೆಂಬರ್ 17 ರಂದು ಕೇವಲ 8 ಗಂಟೆ ಚರ್ಚೆ ನಡೆಸಿ ಪ್ರತಿಪಕ್ಷಗಳ ಅಭಿಪ್ರಾಯಕ್ಕೂ ಬೆಲೆ ಕೊಡದೆ ಸದನವನ್ನು ಬುಲ್ಡೋಜ್ ಮಾಡಿ ಮಸೂದೆಯನ್ನು ಅಂಗೀಕಾರ ಮಾಡಿಸಿಕೊಂಡಿದೆ. ಆ ಮೂಲಕ ದೇಶದ 12.16 ಕೋಟಿ ಕಾರ್ಮಿಕರನ್ನು, ಅವರಲ್ಲಿ ಶೇಕಡ 53.61 ರಷ್ಟು ಅಂದರೆ 6.21 ಕೋಟಿ ಮಹಿಳೆಯರು, ಶೇ.17 ಪರಿಶಿಷ್ಟ ಜಾತಿ ಹಾಗೂ ಶೇಕಡ 11 ರಷ್ಟು ಪರಿಶಿಷ್ಟ ಪಂಗಡದ ನರೇಗಾ ಕೂಲಿ ಕಾರ್ಮಿಕರ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಮ್ಮ ರಾಜ್ಯದಲ್ಲಿ 71.18 ಲಕ್ಷ ಸಕ್ರಿಯ ನರೇಗಾ ಕೂಲಿ ಕಾರ್ಮಿಕರು ಇದ್ದು, ಈ ಪೈಕಿ 36.75 ಲಕ್ಷ ಮಹಿಳೆಯರು ಇದ್ದಾರೆ. ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ಇವರೆಲ್ಲರ ಬದುಕು ಬೀದಿಗೆ ಬರುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಆರ್ಥಿಕತೆ ಸುಧಾರಣೆಯಾದರೆ ದೇಶ ಸದೃಢವಾಗುತ್ತದೆ ಎಂಬ ಕನಸು ಮಹಾತ್ಮ ಗಾಂಧೀಜಿ ಅವರದ್ದಾಗಿತ್ತು. ಆದರೆ, ಮೋದಿ ಸರ್ಕಾರ ಆ ಆಶಯಕ್ಕೆ ತಿಲಾಂಜಲಿ ಇಡಲು ಹೊರಟಿದೆ ಎಂದು ಕಿಡಿಕಾರಿದರು.

ಮನರೆಗಾದಲ್ಲಿ ಗ್ರಾಮಪಂಚಾಯ್ತಿಗೆ ಯೋಜನೆ ಆಯ್ಕೆ ಮಾಡುವ ಅಧಿಕಾರವಿತ್ತು. ಆದರೆ, ಈಗ ಆ ಅಧಿಕಾರವನ್ನು ಕಿತ್ತುಕೊಂಡು ಕೇಂದ್ರ ಸರ್ಕಾರ ಆಯ್ಕೆ ಮಾಡಿದ ಗ್ರಾಮಕ್ಕೆ ಮಾತ್ರ ಅನುದಾನ ಲಭ್ಯವಾಗಲಿದೆ.

ವರ್ಷವಿಡೀ ನೂರು ದಿನಗಳ ಉದ್ಯೋಗದ ಅವಕಾಶವನ್ನು ತೆಗೆದುಹಾಕಿ ಕೃಷಿ ಚಟುವಟಿಕೆ ಸಂದರ್ಭದಲ್ಲಿ 60 ದಿನಗಳ ಕಾಲ ಉದ್ಯೋಗ ಇಲ್ಲದಂತೆ ಮಾಡಲಾಗಿದೆ. ಹೀಗಾಗಿ ಕೂಲಿ ಕಾರ್ಮಿಕರು ಅತ್ಯಂತ ಕಡಿಮೆ ಕೂಲಿಗೆ ಬೇರೆ ಕಡೆ ಉದ್ಯೋಗಕ್ಕೆ ಹೋಗುವ ಅನಿವಾರ್ಯತೆಯನ್ನು ಕೇಂದ್ರ ಸರ್ಕಾರ ತಂದಿದೆ. ಈ ಮೂಲಕ ಕೂಲಿ ಖಾತರಿಯನ್ನು ಕಿತ್ತುಕೊಂಡು ಕಾರ್ಮಿಕರ ಹೊಟ್ಟೆ ಮೇಲೆ ಹೊಡೆಯಲಾಗುತ್ತಿದೆ ಎಂದರು.

ಈ ಮೊದಲು ಮನರೇಗಾ ವೇತನವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ, ಈಗ ಶೇಕಡಾ 60 ರಷ್ಟನ್ನು ಕೇಂದ್ರ ನೀಡಲಿದ್ದು, ಉಳಿದ ಶೇಕಡ 40 ರಷ್ಟನ್ನು ರಾಜ್ಯ ಸರ್ಕಾರಗಳೇ ಭರಿಸಬೇಕಿದೆ. ಇದರಿಂದ ರಾಜ್ಯಗಳಿಗೆ ಭಾರೀ ಹೊರೆ ಬೀಳುತ್ತದೆ ಎಂದು ಸುರೇಶ್ ಅಂಕಿಅಂಶ ನೀಡಿದರು.

ಈ ಮೊದಲು ನೇರವಾಗಿ ಕೂಲಿ ಕಾರ್ಮಿಕರ ಖಾತೆಗೆ ಮನರೇಗಾ ಕೂಲಿ ಪಾವತಿಯಾಗುತ್ತಿತ್ತು. ಆದರೆ, ಈಗ ಈ ಕರಾಳ ಕಾಯ್ದೆಯಿಂದ ಕಾರ್ಮಿಕರನ್ನು ನಿಯೋಜಿಸುವ ಗುತ್ತಿಗೆದಾರರಿಗೆ ಅವಕಾಶ ಸಿಕ್ಕಿದ್ದು, ಅವರು ವೇತನ ವಿಚಾರದಲ್ಲಿ ಕಾರ್ಮಿಕರನ್ನು ಶೋಷಣೆ ಮಾಡಲಿದ್ದಾರೆ. ಕೆಲವು ಕಾರ್ಪೊರೇಟ್ ಕಂಪನಿಗಳಿಗೆ ಅನುಕೂಲ ಮಾಡಿಕೊಡುವ ದುರುದ್ದೇಶ ಈ ಕಾಯ್ದೆಯ ಹಿಂದಿದೆ ಎಂದು ಅವರು ಆರೋಪಿಸಿದರು.

ಈ ಎಲ್ಲಾ ಕಾರಣಗಳಿಂದಾಗಿ ಇದುವರೆಗೆ ಇದ್ದ ಮನರೇಗಾ ಸ್ವರೂಪವನ್ನೇ ಉಳಿಸಿಕೊಳ್ಳಬೇಕು, ಕಾರ್ಮಿಕರಿಗೆ ದಿನಕ್ಕೆ ಕನಿಷ್ಠ 400 ರುಪಾಯಿ ವೇತನ ನಿಗದಿ ಮಾಡಬೇಕು ಎಂದು ಆಗ್ರಹಿಸಿದ ಅವರು, ಹೊಸ ಕಾಯ್ದೆ ರದ್ದಾಗುವವರೆಗೆ ಕಾಂಗ್ರೆಸ್ ಪಕ್ಷ ದೇಶಾದ್ಯಂತ ಹೋರಾಟ ಮಾಡಲಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕೋಲಾರ ಜಿಲ್ಲೆಯ ಶಾಸಕರಾದ ನಂಜೇಗೌಡ, ಕೊತ್ತೂರು ಮಂಜುನಾಥ್, ಎಸ್ ಎನ್ ನಾರಾಯಸ್ವಾಮಿ, ಅನಿಲ್, ನಾಸೀರ್ ಅಹ್ಮದ್ ಸೇರಿದಂತೆ ಹಲವು ಮುಖಂಡರು ಇದ್ದರು.

Related Posts

Leave a Reply

Your email address will not be published. Required fields are marked *