Menu

ಭ್ರಷ್ಟಾಚಾರ ಅಂತ್ಯ, ಪಾರದರ್ಶಕತೆ ಹೆಚ್ಚಿಸಿದ ವಿಬಿ ಜಿ ರಾಮ್‌ ಜಿ ಯೋಜನೆ: ಸಂಸದ ಕೆ. ಸುಧಾಕರ್‌

MP Sudhakar

ಮನರೇಗಾ ಯೋಜನೆಯ ಹೆಸರಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ವಿಬಿ ಜಿ ರಾಮ್‌ಜಿ ಯೋಜನೆ ಅಂತ್ಯಗೊಳಿಸಿದೆ. ಆದರೆ ಕಾಂಗ್ರೆಸ್‌ ನಾಯಕರು ಕೇವಲ ಹೆಸರು ಬದಲಾವಣೆಯ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿದ್ದಾರೆ ಎಂದು ಸಂಸದ ಡಾ.ಕೆ. ಸುಧಾಕರ್‌ ಹೇಳಿದರು.

ದೇವನಹಳ್ಳಿಯಲ್ಲಿ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರ ಮನರೇಗಾ ಯೋಜನೆಯನ್ನು ಸುಧಾರಣೆ ಮಾಡಿ ವಿಬಿ ಜಿ ರಾಮ್‌ ಜಿ ಯೋಜನೆ ತಂದಿದೆ. ಇದು 2047 ರ ‘ವಿಕಸಿತ ಭಾರತ’ದ ಗುರಿಯನ್ನು ತಲುಪಲು ಪೂರಕವಾಗಿದೆ. 2005 ರ ಮೂಲ ಕಾಯಿದೆಯನ್ನು ಈಗಿನ ಕಾಲಕ್ಕೆ ತಕ್ಕಂತೆ ಸುಧಾರಣೆ ಮಾಡುವುದು ಅನಿವಾರ್ಯ ವಾಗಿತ್ತು. ಯುಪಿಎ ಆಡಳಿತದ ಅವಧಿಯಲ್ಲಿ ಈ ಯೋಜನೆಯಡಿ ಭ್ರಷ್ಟಾಚಾರ ಹಾಗೂ ರಾಜಕೀಯ ಹಸ್ತಕ್ಷೇಪ ನಡೆಯುತ್ತಿತ್ತು. ಗ್ರಾಮ ಪಂಚಾಯಿತಿಗಳ ಪಾತ್ರ ಹೆಸರಿಗೆ ಮಾತ್ರ ವಿದ್ದು, ರಾಜಕೀಯ ತೀರ್ಮಾನಗಳೇ ಹೆಚ್ಚಾಗಿರುತ್ತಿತ್ತು. ಇದನ್ನು ಸ್ಥಳೀಯ ಶಾಸಕರು ಮತ್ತು ಕಾರ್ಯಕರ್ತರು ನಿಯಂತ್ರಣ ಮಾಡುತ್ತಿದ್ದರು. ಹಾಜರಾತಿಯಲ್ಲಿ ಭ್ರಷ್ಟಾಚಾರ ಸಾಮಾನ್ಯ ವಾಗಿದ್ದು, 10 ಜನ ಕೆಲಸಕ್ಕೆ ಬಂದರೆ 50 ಜನರ ಹೆಸರು ನೋಂದಾಯಿಸಲಾಗುತ್ತಿತ್ತು. ಯೋಜನೆಯ ಹಣದಲ್ಲಿ ಶೇ.40 ರಿಂದ 50 ಮೊತ್ತ ದುರುಪಯೋಗವಾಗಿದೆ ಎಂದು ಸಿಎಜಿ ವರದಿ ಕೂಡ ಹೇಳಿತ್ತು ಎಂದರು.

ಗುತ್ತಿಗೆದಾರರಿಗೆ ಕೆಲಸ ನೀಡುವುದು ಹಾಗೂ ಕೂಲಿ ಪಾವತಿಯಲ್ಲಿ 2 ರಿಂದ 4 ತಿಂಗಳ ವಿಳಂಬವಾಗುತ್ತಿತ್ತು. ಇದರಿಂದ ಶ್ರಮ ಪಟ್ಟ ಗ್ರಾಮೀಣ ಜನರಿಗೆ ತೀವ್ರ ಅನ್ಯಾಯವಾಗಿತ್ತು. ಬೋಗಸ್‌ ಬಿಲ್‌ಗಳನ್ನು ತಡೆಹಿಡಿರುವುದಕ್ಕೆ, ಮಹಾತ್ಮ ಗಾಂಧೀಜಿ ಹೆಸರಲ್ಲಿ ನೂರಾರು ಕೋಟಿ ಲೂಟಿ ಮಾಡಿರುವುದನ್ನು ತಡೆದಿರುವುದಕ್ಕೆ ಕಾಂಗ್ರೆಸ್‌ ಈಗ ಹೋರಾಟ ಮಾಡುತ್ತಿದೆ. ಗಾಂಧೀಜಿಯವರು ಶ್ರೀರಾಮನನ್ನು ಇಷ್ಟಪಡುತ್ತಿದ್ದರು. ಆದರೆ ಕಾಂಗ್ರೆಸ್‌ಗೆ ಶ್ರೀರಾಮನ ಹೆಸರು ಆಗುತ್ತಿಲ್ಲ. ಆ ಹೆಸರನ್ನೇ ಕಾಂಗ್ರೆಸ್‌ ವಿರೋಧಿಸುತ್ತಿದೆ. ಕಾಂಗ್ರೆಸ್‌ ಹೋರಾಟದ ಮೂಲಕ ಭ್ರಷ್ಟಾಚಾರಕ್ಕೆ ಮಣೆ ಹಾಕುತ್ತೇವೆ ಎಂಬ ಸಂದೇಶ ನೀಡುತ್ತಿದೆ ಎಂದು ಹೇಳಿದರು.

ಹೊಸ ಯೋಜನೆಯಲ್ಲಿ ಪಾರದರ್ಶಕತೆ ತರಲಾಗಿದೆ. ಜಿಯೋ ಟ್ಯಾಗ್‌, ಸ್ಯಾಟಲೈಟ್‌ ಚಿತ್ರ, ಗ್ರಾಮ ಪಂಚಾಯಿತಿಗೆ ಅಧಿಕಾರ, ಗತಿಶಕ್ತಿ ಕಚೇರಿಗೆ ಸಂಪರ್ಕ ಮೊದಲಾದ ಕ್ರಮಗಳ ಮೂಲಕ ಯೋಜನೆಯಲ್ಲಿ ಅಕ್ರಮವನ್ನು ತಡೆಗಟ್ಟಲಾಗಿದೆ. ಗ್ರಾಮೀಣ ಭಾರತದ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಯಾವುದೇ ಹಣ ಪೋಲಾಗುವುದನ್ನು ತಡೆಯುವ ಉದ್ದೇಶದಿಂದ ಈ ಯೋಜನೆ ತರಲಾಗಿದೆ. ಹವಾಮಾನ ವೈಪರೀತ್ಯ, ಆಸ್ತಿಯ ಸೃಜನೆ, ಜಲ ಸಂರಕ್ಷಣೆ, ರೈತರ ಕೃಷಿ ಭೂಮಿ ಫಲವತ್ತತೆ ಕಾಪಾಡುವುದು ಮೊದಲಾದ ಅಂಶಗಳನ್ನು ಇದರಲ್ಲಿ ಸೇರಿಸಲಾಗಿದೆ ಎಂದರು.

ಹಿಂದಿನ ಯುಪಿಎ ಅವಧಿಯಲ್ಲಿ ಯೋಜನೆಗೆ 2.13 ಲಕ್ಷ ಕೋಟಿ ರೂ. ಖರ್ಚು ಮಾಡಿದ್ದರೆ, ಎನ್‌ಡಿಎ ಸರ್ಕಾರ 8.53 ಲಕ್ಷ ಕೋಟಿ ರೂ. ಖರ್ಚು ಮಾಡಿದೆ. ಅಂದರೆ ಅನುದಾನ 4 ಪಟ್ಟು ಅಧಿಕ ವಾಗಿದೆ. ಹಿಂದೆ 1,660 ಕೋಟಿ ಮಾನವ ದಿನಗಳನ್ನು ಸೃಷ್ಟಿಸಿದ್ದರೆ, ನಮ್ಮ ಸರ್ಕಾರದ ಅವಧಿಯಲ್ಲಿ 3,210 ಕೋಟಿ ದಿನಗಳನ್ನು ಸೃಜಿಸಲಾಗಿದೆ. ಹಿಂದೆ ವರ್ಷಕ್ಕೆ 153 ಲಕ್ಷ ಕಾಮಗಾರಿ ನಡೆಯುತ್ತಿದ್ದರೆ, ಈಗ 862 ಲಕ್ಷ ಆಗಿದೆ. ಅಂದರೆ 4 ಪಟ್ಟು ಹೆಚ್ಚಾಗಿದೆ. ಹಿಂದೆ ಆಸ್ತಿ ನಿರ್ಮಾಣ 12% ಆಗಿದ್ದರೆ, ಈಗ 62.95% ಆಗಿದೆ. ವರ್ಷದಲ್ಲಿ ಉದ್ಯೋಗದ ದಿನಗಳನ್ನು 100 ರಿಂದ 125 ಕ್ಕೆ ಹಾಗೂ ಪರಿಶಿಷ್ಟ ವರ್ಗ ಮತ್ತು ಗುಡ್ಡಗಾಡು ಪ್ರದೇಶಗಳಿಗೆ 150 ದಿನಗಳಿಗೆ ಹೆಚ್ಚಿಸಲಾಗಿದೆ. ಆದ್ದರಿಂದ ಈ ಹೋಲಿಕೆಯನ್ನು ನೋಡಬೇಕು ಎಂದು ಹೇಳಿದರು.

ಈ ಯೋಜನೆಯ ಮೂಲಕ ಮಹಾತ್ಮ ಗಾಂಧೀಜಿಯವರ ಸ್ವರಾಜ್ಯ ಕನಸಿನಂತೆ ಸ್ಥಳೀಯ ಸಂಸ್ಥೆಗಳಿಗೆ ಶಕ್ತಿ ತುಂಬಲಾಗುತ್ತಿದೆ. ಕಾಂಗ್ರೆಸ್ ಪಕ್ಷ ಹೆಸರು ಬದಲಾವಣೆಯ ನೆಪದಲ್ಲಿ ರಾಜಕೀಯ ಮಾಡುತ್ತಿದೆ. ಆದರೆ ದೇಶದ 600 ಕ್ಕೂ ಹೆಚ್ಚು ಸರ್ಕಾರಿ ಸಂಸ್ಥೆಗಳು ಒಂದೇ ಕುಟುಂಬದ ಹೆಸರಿನಲ್ಲಿ ಇರುವುದಕ್ಕೆ ಮೊದಲು ಕಾಂಗ್ರೆಸ್ ಉತ್ತರಿಸಬೇಕು ಎಂದು ಸಂಸದ ಡಾ.ಕೆ.ಸುಧಾಕರ್‌ ಹೇಳಿದರು.

Related Posts

Leave a Reply

Your email address will not be published. Required fields are marked *