ಬೆಂಗಳೂರಿನಲ್ಲಿ ಮಹಿಳೆಯೊಬ್ಬರು ಪೊಲೀಸ್ ಇನ್ಸ್ಪೆಕ್ಟರ್‌ಗೆ ಪ್ರೀತಿಸು ಎಂದು ಕಾಟ ಕೊಡುತ್ತಿದ್ದು, ಅದು ಅತಿಯಾಗಿ ಈಗ ಪೊಲೀಸ್ ಅತಿಥಿಯಾಗಿದ್ದಾಳೆ. ಪ್ರೀತಿಸದಿದ್ರೆ ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಬೆದರಿಕೆ ಹಾಕುತ್ತಿರುವುದಾಗಿ ಆಕೆ ವಿರುದ್ಧ ಇನ್ಸ್ಪೆಕ್ಟರ್ ದೂರು ದಾಖಲಿಸಿದ್ದರು.
ಬೆಂಗಳೂರು ರಾಮಮೂರ್ತಿನಗರ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಎಂಬವರ ಹಿಂದೆ ಬಿದ್ದು ಪ್ರೀತಿಸು ಎಂದು ಕಾಡಿಸುತ್ತಿದ್ದ ಮಹಿಳೆ ವನಜಾಳನ್ನು ಪೊಲೀಸರು ಬಂಧಿಸಿದ್ದಾರೆ. 11 ಮೊಬೈಲ್ ನಂಬರ್‌ಗಳಿಂದ ಕರೆ ಮಾಡಿ ಇನ್ಸ್ಪೆಕ್ಟರ್‌ಗೆ ನನ್ನ ಪ್ರೀತಿಸು ಎಂದು ಕಾಡುತ್ತಿದ್ದ ವನಜಾ ಪೊಲೀಸ್ ಠಾಣೆಗೆ ಬಂದು ಲವ್ ಲೆಟರ್ ಕೊಟ್ಟಿದ್ದಳು. ಮಹಿಳೆ ಕಾಟಕ್ಕೆ ಬೇಸತ್ತ ಪೊಲೀಸ್ ಇನ್ಸ್ಪೆಕ್ಟರ್ ಸತೀಶ್ ಆಕೆಯ 11 ನಂಬರ್‌ಗಳನ್ನು ಬ್ಲಾಕ್ ಮಾಡಿದ್ದರು.
ಹನಿ ಟ್ರಾಪ್ ಮಾಡಿ ಹಣ ಸಂಪಾದನೆ ಮಾಡಲು ಪೊಲೀಸ್ ಇನ್ಸ್ಪೆಕ್ಟರ್ ಜೊತೆ ಪ್ರೀತಿ ಪ್ರೇಮದ ಆಟವಾಡುತ್ತಿದ್ದಳಾ ವನಜಾ ಎಂಬ ಅನುಮಾನ ಕೂಡ ವ್ಯಕ್ತವಾಗಿದೆ. ಈಕೆಯ ಕಾಟ ತಡೆಯಲಾಗದೆ ಇನ್ಸ್ಪೆಕ್ಟರ್ ದೂರು ದಾಖಲಿಸಿದ ಬಳಿಕ ಪೊಲೀಸರು ಬಂಧಿಸಿ ಆಕೆಯ ವಿಚಾರಣೆ ನಡೆಸುತ್ತಿದ್ದಾರೆ. ವಿಚಾರಣೆಯ ಬಳಿಕ ಮಹಿಳೆಯ ಈ ನಡವಳಿಕೆಯ ಹಿಂದಿನ ವಿಚಾರಗಳು ಬಯಲಾಗಲಿವೆ.


