ವಾಲ್ಮೀಕಿ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ಸಂಸದ ತುಕಾರಾಂ ಹಾಗೂ ಮೂವರು ಶಾಸಕರ ಮನೆ ಸೇರಿದಂತೆ ಕರ್ನಾಟಕದ ಒಟ್ಟು 8 ಕಡೆ ಏಕಕಾಲಕ್ಕೆ ಇಡಿಅಧಿಕಾರಿಗಳು ದಾಳಿ ಮಾಡಿದ್ದಾರೆ.
ಲೋಕಸಭಾ ಚುನಾವಣೆಗೆ ವಾಲ್ಮೀಕಿ ನಿಗಮದ ಹಣ ಬಳಕೆ ಮಾಡಲಾಗಿದೆ ಎಂಬ ಆರೋಪದಡಿ ಇಡಿ ಅಧಿಕಾರಿಗಳು ಸಂಸದ ತುಕಾರಾಂ ಅವರ ಮನೆಗೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದು ದಾಖಲೆಗಳ ಪರಿಶೀಲನೆ ಮಾಡುತ್ತಿದ್ದಾರೆ. ಬಳ್ಳಾರಿ ಚುನಾವಣೆಗೆ 21 ಕೋಟಿ ಬಳಸಿದ ಆರೋಪ, ಚುನಾವಣೆಗೆ 200 ರೂ. ಹಂಚಿಕೆ ಆರೋಪದಡಿ ಈ ದಾಳಿ ನಡೆದಿದೆ.
ಬಳ್ಳಾರಿಯಲ್ಲಿ 5 , ಬೆಂಗಳೂರಿನಲ್ಲಿ 3 ಕಡೆ ಇಡಿ ದಾಳಿ ನಡೆದಿದ್ದು, ಬಳ್ಳಾರಿ ಸಂಸದ ಇ.ತುಕಾರಾಂ, ಕಂಪ್ಲಿ ಕ್ಷೇತ್ರದ ಶಾಸಕ ಜೆ.ಎನ್.ಗಣೇಶ್, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ನಾರಾಭರತ್ ರೆಡ್ಡಿ, ಬಳ್ಳಾರಿ ಗ್ರಾಮಾಂತರ ಶಾಸಕ ಬಿ.ನಾಗೇಂದ್ರ ಮತ್ತು ಕೂಡ್ಲಿಗಿ ಶಾಸಕ ಶ್ರೀನಿವಾಸ್ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ಮಾಡಲಾಗುತ್ತಿದೆ.
ಚುನಾವಣೆಯಲ್ಲಿ ಮತದಾರರಿಗೆ 200 ರೂ.ನಂತೆ ಹಂಚಿಕೆ ಮಾಡಿರುವ ಆರೋಪ ಕೇಳಿಬಂದಿದೆ. ಮಾಜಿ ಸಚಿವ ನಾಗೇಂದ್ರ ಅವರ ಪಿಎ ಗೋವರ್ಧನ್ ಮನೆ ಮೇಲೂ ದಾಳಿ ನಡೆಸಿರುವ ಇಡಿ ಪರಿಶಿಲನೆ ಮುಂದುವರಿಸಿದೆ.
ಕಾಂಗ್ರೆಸ್ ಸಂಸದರು, ಶಾಸಕರ ಮನೆಗಳ ಮೇಲೆ ಇಡಿ ದಾಳಿ ವಿಚಾರವಾಗಿ ಗೌರಿಬಿದನೂರಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ಯಾರೇ ಆಗಲಿ ತಪ್ಪು ಮಾಡಿದ್ದರೆ ಕ್ರಮಕೈಗೊಳ್ಳಲಿ. ಯಾವುದೇ ಕಾರಣಕ್ಕೂ ತಪ್ಪುಗಳನ್ನು ನಾವು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.