Menu

ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಶ್ರೀ ಉಚ್ಚಾಟನೆ

ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕ ಕೊಡಿ ಅಭಿಯಾನ ತೀವ್ರಗೊಂಡಿರುವ ನಡುವೆಯೇ  ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಚಾಟನೆ ಮಾಡಲು ಟ್ರಸ್ಟಿಗಳು ಸಭೆಯಲ್ಲಿ ನಿರ್ಧರಿಸಿದ್ದಾರೆ. ಸಭೆಯಲ್ಲಿ 15 ಟ್ರಸ್ಟಿಗಳಲ್ಲಿ 13 ಮಂದಿ ಭಾಗವಹಿಸಿ ನಿರ್ಣಯ ಈ ಕೈಗೊಂಡಿದ್ದಾರೆ. ಮಠದ ಟ್ರಸ್ಟಿಗಳು ನಿರ್ಣಯ ಕೈಗೊಂಡು ಸ್ವಾಮೀಜಿಗಳನ್ನು ಪೀಠದಿಂದ ಉಚ್ಛಾಟಿಸಿರುವುದಾಗಿ ಟ್ರಸ್ಟಿ ಬಸವರಾಜ್ ದಿಂಡೂರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

2008 ರಿಂದ ಬಂದ ಸರ್ಕಾರಿ ಅನುದಾನ ಹಾಗೂ ಭಕ್ತರ ದೇಣಿಗೆ ಹಣವನ್ನ ಟ್ರಸ್ಟಿಗಳು ದುರ್ಬಳಕೆ ಮಾಡಿಕೊಂಡಿದ್ದಾರೆ. ಪ್ರಧಾನ ಧರ್ಮಧರ್ಶಿ ಬಿಸಿ ಉಮಾಪತಿ, ಟ್ರಸ್ಟಿ ಚಂದ್ರಶೇಖರ್ ಪೂಜಾರ್ ಸೇರಿದಂತೆ ಹಲವು ಟ್ರಸ್ಟಿಗಳ ವಿರುದ್ಧ ಹಣ ದುರ್ಬಳಕೆ ಆರೋಪ ಹೊರಿಸಲಾಗಿದೆ. ಕಳೆದ ಕೆಲವು ದಿನಗಳ ಹಿಂದೆ ನಡೆದ ಟ್ರಸ್ಟಿಗಳ ಸಭೆಯಲ್ಲಿ ಗಲಾಟೆಯಾಗಿ ಆಡಳಿತಾಧಿಕಾರಿ ಮೇಲೆ ಹಲ್ಲೆ ನಡೆದಿತ್ತು. ಲೆಕ್ಕ ಕೇಳಿದ್ದಕ್ಕೆ ಟ್ರಸ್ಟಿಗಳೇ ಆಡಳಿತಾಧಿಕಾರಿ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆಡಳಿತಾಧಿಕಾರಿ ರಾಜ್‌ಕುಮಾರ್‌ ಆರೋಪಿಸಿದ್ದರು. ಅಂದಿನಿಂದ ಲೆಕ್ಕ ಕೊಡಿ ಅಭಿಯಾನ ಆರಂಭಿಸಲಾಗಿತ್ತು.

ಹರಿಹರ ಪಂಚಮಸಾಲಿ ಪೀಠದ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಲಿಂಗಾಯತ ಗುರುಪೀಠದ ಧರ್ಮದರ್ಶಿ ಮಂಡಳಿ ಹಾಗೂ ಭಕ್ತರ ನಡುವಿನ ಸಂಘರ್ಷದಿಂದ ಮಠದ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು, ಪೀಠದ ಆಡಳಿತ ಮತ್ತು ನಡೆಯ ಬಗ್ಗೆ ಲೆಕ್ಕಪತ್ರ ನೀಡುವಂತೆ ಭಕ್ತರು ಆಗ್ರಹಿಸಿದ್ದರು.

ಮುಂಜಾಗ್ರತಾ ಕ್ರಮವಾಗಿ ಮಠದ ಆವರಣ ಸುತ್ತ 163 ಕಲಂ ಅನ್ವಯ ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ನಿಷೇದಾಜ್ಞೆ ಜಾರಿಗೊಳಿಸಿದ್ದರು. ಮಠದ ಗೇಟ್‌ ಬಳಿಯೇ ಭಕ್ತರು ಪ್ರತಿಭಟನೆ ನಡೆಸಿದ್ದರು. 100ಕ್ಕೂ ಹೆಚ್ಚು ಜನರನ್ನು ಪೊಲೀಸರು ವಶಕ್ಕೆ ಪಡೆದರು.

ಪಂಚಮಸಾಲಿ ಗುರುಪೀಠದ ಟ್ರಸ್ಟಿ ಬಾವಿ ಬೆಟ್ಟಪ್ಪ, ಸ್ವಾಮೀಜಿಗಳನ್ನು ತೆಗೆದು ಹಾಕಲು ಸರ್ವ ಟ್ರಸ್ಟಿಗಳ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಸ್ವಾಮೀಜಿಗಳಿಗೆ ಒಂದು ನಿರ್ಣಯಕ್ಕೆ ಬನ್ನಿ ಎಂದು ಗಡುವು ನೀಡಿದ್ದೇವು. ಮಾರ್ಚ್ 24 ಕ್ಕೆ ನಿರ್ಣಯಕ್ಕೆ ಗಡುವು ನೀಡಿದ್ದೆವು, ಯಾವುದೇ ಮಾಹಿತಿ ನೀಡಿದ ಹಿನ್ನೆಲೆ ಉಚ್ಛಾಟನೆಗೆ ನಿರ್ಧರಿಸಲಾಯಿತು. ಗೌರವಯುತವಾಗಿ ಮಠ ಬಿಡಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಪಂಚಮಸಾಲಿಗಳು ಪ್ರಬಲರಾಗುತ್ತಿರುವ ಹಿನ್ನೆಲೆಯಲ್ಲಿ ಸ್ವಾಮೀಜಿಗಳನ್ನು ಟಾರ್ಗೆಟ್‌ ಮಾಡಲಾಗುತ್ತಿದೆ ಎಂದು ವಚನಾನಂದ ಸ್ವಾಮೀಜಿ ಆರೋಪ ಮಾಡಿದ್ದಾರೆ. ಹರಿಹರದಲ್ಲಿರುವ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಪೀಠದಿಂದ ಉಚ್ಚಾಟನೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು. ಕರ್ನಾಟಕದಲ್ಲಿ ಪಂಚಮಸಾಲಿ ನಾಯಕರು ಮತ್ತು ಸ್ವಾಮೀಜಿಗಳು ಗಟ್ಟಿಯಾಗುತ್ತಿದ್ದಾರೆ. ಈ ಕಾರಣಕ್ಕೆ ಜಯ ಮೃತ್ಯುಂಜಯ ಸ್ವಾಮೀಜಿ ಇರಬಹುದು, ಹಿಂದೆ ಸಿದ್ದಲಿಂಗ ಸ್ವಾಮೀಜಿ ಇರಬಹುದು, ಈಗ ನಮ್ಮನ್ನು ಟಾರ್ಗೆಟ್‌ ಮಾಡಲಾಗಿದೆ ಎಂದು ದೂರಿದ್ದಾರೆ.

ಟ್ರಸ್ಟಿಗಳ ಬಗ್ಗೆ ಮಾತನಾಡಿ ಕೆಲವರಿಗೆ ನಾವು ಹಿಂದೂಗಳು ಎಂದು ಹೇಳಬಾರದು. ಕೆಲವರಿಗೆ ಲಿಂಗಾಯತ ಹಿಂದೂ ಎನ್ನಬಾರದು. ಇಂದು ಸಭೆ ನಡೆಯುವ ಬಗ್ಗೆ ಯಾವುದೇ ನೋಟಿಸ್‌ ನೀಡಿಲ್ಲ. ಪಂಚಮಸಾಲಿ ಮಠ 12 ಜನರ ಮಠ ಅಲ್ಲ. ಈ ನಿರ್ಧಾರದಿಂದ ನನಗೆ ಯಾವುದೇ ಆತಂಕ ಇಲ್ಲ ಎಂದು ಹೇಳಿದರು. ಸರ್ಕಾರದಿಂದ ಬಂದ ಅನುದಾನದ ಲೆಕ್ಕ ನೀಡುವಂತೆ ಭಕ್ತರು ಕೇಳಿದ್ದರು. ತಮ್ಮ ಮೇಲೆ ಬಂದ ಆರೋಪಕ್ಕೆ ಹೊರಹಾಕಿದ್ದಾರೆ. ಪಂಚಮಸಾಲಿ ಸಮಾಜದ ಜನ ಹೇಳಿದಂತೆ ಕೇಳುತ್ತೇನೆ ಎಂದರು.

Related Posts

Leave a Reply

Your email address will not be published. Required fields are marked *