ಪಹಲ್ಗಾಮ್ನಲ್ಲಿ ಉಗ್ರರ ದಾಳಿಗೆ ಪ್ರತೀಕಾರವಾಗಿ ಭಾರತವು ಆಪರೇಷನ್ ಸಿಂಧೂರ್ ನಡೆಸಿ ತಕ್ಕ ಉತ್ತರ ನೀಡಿದೆ. ಇದಾದ ಬಳಿಕ ದೇಶದಲ್ಲಿ ಪಾಕ್ ವಿರುದ್ಧ ಅಭಿಯಾನವೇ ಶುರುವಾಗಿದೆ. ದೇಶದ ಚಿತ್ರರಂಗವು ಪಾಕ್‌ಗೆ ನೆರವಾಗಿರುವ ಟರ್ಕಿಯಲ್ಲಿ ಇನ್ನು ಮುಂದೆ ಶೂಟಿಂಗ್ ನಡೆಸದಿರಲು ನಿರ್ಧರಿಸಿದೆ, ಕರ್ನಾಟಕದ ವಿಜಯಪುರ ರೈತರು ಉತ್ಪನ್ನಗಳನ್ನು ಟರ್ಕಿಗೆ ರಫ್ತು ಮಾಡುವುದಿಲ್ಲವೆಂದು ಹೇಳುತ್ತಿದ್ದಾರೆ. ಹೊನ್ನಾವರದ ವೀಳ್ಯದೆಲೆ ಬೆಳೆಗಾರರು ಕೂಡ ಪಾಕಿಸ್ತಾನಕ್ಕೆ ರಫ್ತು ಮಾಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಪಾತ್ರ ಭಾಗದ ರೈತರು ಬೆಳೆದ ವೀಳ್ಯದೆಲೆಯನ್ನು ದೆಹಲಿ ವರ್ತಕರು ಖರೀದಿಸಿ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರು. ಇದು ಹಲವು ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. ಕೇಂದ್ರ ಸರ್ಕಾರ ಭಾರತದ ವಸ್ತುಗಳು ಪಾಕಿಸ್ತಾನಕ್ಕೆ ಹೋಗದಂತೆ ನಿರ್ಬಂಧ ವಿಧಿಸಿದ್ದರಿಂದ ಪಾಕಿಸ್ತಾನ ದಲ್ಲಿ ಬಹು ಬೇಡಿಕೆ ಇರುವ ಹೊನ್ನಾವರ ವೀಳ್ಯೆದೆಲೆಗೂ ಬಿಸಿ ತಾಗಿದೆ.
ಆದರೂ ಹೊನ್ನಾವರದಿಂದ ದೆಹಲಿಗೆ ತಲುಪುವ ವೀಳ್ಯದೆಲೆ ಅನ್ಯ ಮಾರ್ಗದಿಂದ ಪಾಕಿಸ್ತಾನಕ್ಕೆ ತೆರಳುತಿತ್ತು. ಪ್ರತಿ ದಿನ ಹೊನ್ನಾವರದಿಂದ 11 ಕ್ಕೂ ಹೆಚ್ಚು ಟನ್ ವೀಳ್ಯದೆಲೆ ದೆಹಲಿ ತಲುಪಿ ನಂತರ ಪಾಕಿಸ್ತಾನ ಸೇರುತ್ತಿತ್ತು. ಈಗ ಹೊನ್ನಾವರದ ರೈತರು ದೆಹಲಿಯ ವರ್ತಕರಿಗೆ ವೀಳ್ಯದೆಲೆ ಕಳುಹಿಸುವುದನ್ನೇ ನಿರ್ಬಂಧಿಸಿದ್ದಾರೆ. ಪಾಕಿಸ್ತಾನಕ್ಕೆ ಹೋಗುತಿದ್ದ ವೀಳ್ಯದೆಲೆ ಇದೀಗ ದೇಶದ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದೆ.
ದರ ಕುಸಿದರೂ ಪರವಾಗಿಲ್ಲ, ನಷ್ಟವನ್ನು ತಡೆದುಕೊಳ್ಳುತ್ತೇವೆ. ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ಒಪ್ಪಲಾರೆವು. ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೆ ಶಾಶ್ವತವಾಗಿ ನಿರ್ಬಂಧ ವಿಧಿಸಿದ್ದೇವೆ ಎಂದು ರೈತರು ಹೇಳುತ್ತಿದ್ದಾರೆ.