ಭಾರತದ ಜೊತೆ ವಾಣಿಜ್ಯ ಸಂಬಂಧಗಳನ್ನು ಕಡಿದುಕೊಳ್ಳುವ ರೀತಿ ಅಮೆರಿಕ ಕೆಲವೊಂದು ನೀತಿಗಳನ್ನು ಜಾರಿಗೊಳಿಸಿದ ಪರಿಣಾಮ ಇಂದು ಅಮೆರಿಕಕ್ಕೆ ಭಾರಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಲಾದರೂ ಟ್ರಂಪ್‌ಗೆ ಬುದ್ಧಿ ಬರಲಿ…
ಶಾಂಘಾಯ್ ಶೃಂಗಸಭೆ ಬಳಿಕ ಅಮೆರಿಕದ ತಳಮಳ ಅಧಿಕಗೊಂಡಿದೆ. ಭಾರತದ ದಿಟ್ಟ ಹಾಗೂ ಜಾಣನಡೆ ಡೊನಾಲ್ಡ್ ಟ್ರಂಪ್ ಸರ್ಕಾರದ ಪರಮಾಪ್ತ ವಲಯದ ಎದೆ ನಡುಗಿಸಿದೆ. ರಷ್ಯಾ ಚೀನಾ ಮತ್ತು ಇತರೆ ದೇಶಗಳ ನಡುವೆ ಭಾರತದ ತಾಜಾ ದ್ವಿಪಕ್ಷೀಯ ಮಾತುಕತೆ ಹಾಗೂ ಒಪ್ಪಂದಗಳಿಂದ ಒಂದು ರೀತಿಯಲ್ಲಿ ಕಂಗಾಲಾದ ಅಮೆರಿಕ ತನ್ನ ವಿದೇಶಿ ನೀತಿ ಮತ್ತು ನಿಲುವುಗಳನ್ನು ಬದಲಾಯಿಸಿಕೊಳ್ಳುವ ಅನಿವಾರ್ಯ ಸ್ಥಿತಿ ತಲುಪಿದೆ.
ಭಾರತದ ಮೇಲೆ ಅಧಿಕ ಸುಂಕಭಾರವನ್ನು ವಿಧಿಸುವ ಮೂಲಕ, ಹಲವು ಹತ್ತು ವಾಣಿಜ್ಯಿಕ ತೊಡಕುಗಳನ್ನು ಸೃಷ್ಟಿಸಿರುವ ಅಮೆರಿಕ ದೇಶವು ತನ್ನ ಪಾರುಪತ್ಯವನ್ನು ಮೆರೆಯಲು ಹಣೆದ ಎಲ್ಲ ತಂತ್ರಗಳೂ ಈಗ ಒಂದೊಂದಾಗಿ ವಿಫಲವಾಗತೊಡಗಿವೆ.
ಕಳೆದ ವಾರದಲ್ಲಿ ಟ್ರಂಪ್ ಸರ್ಕಾರದ ಅಪ್ತರೊಬ್ಬರು ರಷ್ಯಾದಿಂದ ಭಾರತವು ತೈಲವನ್ನು ಖರೀದಿಸುವ ಮೂಲಕ ಉಕ್ರೇನ್ ಯುದ್ದಕ್ಕೆ ಕುಮ್ಮಕ್ಕು ನೀಡಿದೆ. ಇದು ಮೋದಿ ಯುದ್ಧ ಎಂದು ನೇರವಾಗಿ ಆರೋಪಿಸಿದೆ.
ಭಾರತವು ಈ ಕೂಡಲೇ ತೈಲ ಖರೀದಿಯನ್ನು ಸ್ಥಗಿತಗೊಳಿಸದಿದ್ದಲ್ಲಿ ಅಮೆರಿಕವು ಭಾರತದ ಮೇಲೆ ಮತ್ತಷ್ಟು ಸುಂಕದ ಹೊರೆಯನ್ನು ಹೆಚ್ಚಿಸುವುದು ಖಚಿತ ಎಂದು ಎಚ್ಚರಿಸಿತ್ತು. ಆದರೆ ಅಮೆರಿಕ ಮೇಲಿಂದ ಮೇಲೆ ಒಡ್ಡಿದ ಈ ಎಲ್ಲ ಬೆದರಿಕೆಗಳಿಗೆ ಸೊಪ್ಪು ಹಾಕದ ಭಾರತವು ವ್ಯೂ ಹಾತ್ಮಕ ವಿದೇಶಿ ನೀತಿ ಮತ್ತು ಮಾರ್ಗಗಳನ್ನು ಅನುಸರಿಸುವ ಮೂಲಕ ಟ್ರಂಪ್ ಸುಂಕ ನೀತಿಗಳಿಗೆ ಬಲವಾದ ಪೆಟ್ಟು ನೀಡಿದೆ.
ಅಲ್ಲದೆ ಮುಂದಿನ ದಿನಗಳಲ್ಲಿ ರಷ್ಯಾ ಮತ್ತು ಚೀನಾ ಜೊತೆ ಭಾರತದ ವ್ಯಾಪಾರ ಮತ್ತು ವಾಣಿಜ್ಯಮಯ ಒಪ್ಪಂದಗಳು ಮತ್ತಷ್ಟು ಬಲಗೊಳ್ಳಲಿದೆ ಎಂಬ ದಿಟ್ಟ ಸಂದೇಶವನ್ನು ಭಾರತವೀಗ ಇಡೀ ಜಗತ್ತಿಗೆ ಸಾರಿದೆ.
ಭಾರತದ ಒಟ್ಟಾರೆಯ ಆರ್ಥಿಕ ಪ್ರಗತಿ ಮತ್ತು ಸುಧಾರಣೆಗಳಿಗೆ ಅಡ್ಡಿಯಾಗಿ ನಿಲ್ಲಬೇಕೆಂಬ ಅಮೆರಿಕದ ಅಲೋಚನೆಯೇ ಸರಿಯಲ್ಲ. ಮಿಗಿಲಾಗಿ ರಷ್ಯಾ ಮತ್ತು ಚೀನಾ ದೇಶಗಳೊಂದಿಗೆ ಸಂಬಂಧಗಳನ್ನು ಕಳೆದುಕೊಂಡು ತನ್ನ ಜೊತೆ ಮಾತ್ರವೇ ಎಲ್ಲ ಬಗೆಯ ಒಪ್ಪಂದಗಳನ್ನು ಮಾಡಿಕೊಳ್ಳಬೇಕೆಂಬ ದಬ್ಬಾಳಿಕೆ ಧೋರಣೆಗೆ ಅತಿ ಕಡಿಮೆ ಸಮಯದಲ್ಲಿ ಸೂಕ್ತ ಮತ್ತು ಸಮರ್ಪಕ ಉತ್ತರ ನೀಡಿರುವುದು ಗಮನಾರ್ಹ.
ಭಾರತದ ಜೊತೆ ವಾಣಿಜ್ಯಮಯ ಸಂಬಂಧಗಳನ್ನು ಕಡಿದುಕೊಳ್ಳುವ ರೀತಿಯಲ್ಲಿ ಅಮೆರಿಕ ಕೆಲವೊಂದು ನೀತಿಗಳನ್ನು ಜಾರಿಗೊಳಿಸಿದ ಪರಿಣಾಮವಾಗಿ ಇಂದು ಅಮೆರಿಕ ದೇಶಕ್ಕೇ ಇಂದು ಭಾರಿ ನಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಇದು ಕೇವಲ ಅಮೆರಿಕಕ್ಕೆ ಮಾತ್ರ ಪಾಠವಲ್ಲ.
ಪ್ರಪಂಚದಲ್ಲಿಯೇ ಅತಿ ದೊಡ್ಡ ಮಾರುಕಟ್ಟೆಯನ್ನು ಹೊಂದಿರುವ ಭಾರತವನ್ನು ತೀರಾ ಕಡೆಗಣಿಸಿ ಯಾವುದೇ ದೇಶವಿಂದು ಸ್ವಂತವಾಗಿ ತನ್ನದೇ ಆದ ವಾಣಿಜ್ಯಿಕ ಪ್ರಗತಿಯನ್ನು ಸಮರ್ಥವಾಗಿ ನಿಭಾಯಿಸುವುದು ಅತಿಕಷ್ಟ. ಅಮೆರಿಕದ ಆತುರದ ಮತ್ತು ಹುಂಬುತನದ ತೀರ್ಮಾನ ಗಳಿಂದ ಯಾರಿಗೆ ನಷ್ಟ ಎಂಬುದನ್ನು ಇಂದು ಟ್ರಂಪ್ ಮತ್ತು ಪರಮಾಪ್ತ ವಲಯ ಆತ್ಮಾವಲೋಕನ ಮಾಡಿಕೊಳ್ಳುವ ಸಮುಯವಿದು.