ಭಾರತದ ಮೇಲೆ ಅಮೆರಿಕ ವಿಧಿಸಿರುವ ಸುಂಕಗಳ ಕುರಿತು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿರುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ಭಾರತೀಯ ರಫ್ತಿನ ಮೇಲೆ ಪರಸ್ಪರ ಸುಂಕಗಳನ್ನು ವಿಧಿಸುವ ಡೊನಾಲ್ಡ್ ಟ್ರಂಪ್ ಅವರ ಕ್ರಮವು “ನಮ್ಮ ಆರ್ಥಿಕತೆಯನ್ನು ಧ್ವಂಸಗೊಳಿಸಲಿದೆ” ಎಂದು ಹೇಳಿದ್ದಾರೆ.
ಚೀನಾ ದೇಶವು ವಾಸ್ತವ ನಿಯಂತ್ರಣ ರೇಖೆಯಲ್ಲಿ (ಎಲ್ ಎಸಿ) ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಆರೋಪಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಮತ್ತು ಪ್ರಧಾನಿ ನರೇಂದ್ರ ಮೋದಿ ಈ ವಿಷಯದ ಬಗ್ಗೆ ಚೀನಾಕ್ಕೆ ಪತ್ರ ಬರೆದಿದ್ದಾರೆ. ಆದರೆ “ನಮ್ಮ ದೇಶದ ಸರ್ಕಾರ”ದ ಬದಲಾಗಿ ಬೀಜಿಂಗ್‌ನ ರಾಯಭಾರಿಯ ಮೂಲಕ ಈ ಮಾಹಿತಿ ಹೊರಬಂದಿದೆ ಎಂದು ದೂರಿದ್ದಾರೆ.
ನಾವು ನಮ್ಮ ಭೂಮಿಯನ್ನು ಮರಳಿ ಪಡೆಯಬೇಕು. ಪ್ರಧಾನಿ ಮತ್ತು ರಾಷ್ಟ್ರಪತಿ ಈಗಾಗಲೇ ಚೀನಿಯರಿಗೆ ಪತ್ರ ಬರೆದಿದ್ದಾರೆ ಎಂದು ನನಗೆ ತಿಳಿದುಬಂದಿದೆ. ನಾವು ಇದನ್ನು ನಮ್ಮ ದೇಶದವರ ಬದಲಾಗಿ ಚೀನಾದ ರಾಯಭಾರಿಯಿಂದ ತಿಳಿದುಕೊಳ್ಳುವಂತಾಗಿದೆ ಎಂಬುದು ಬೇಸರದ ಸಂಗತಿ. ಮತ್ತೊಂದೆಡೆ, ನಮ್ಮ ಮಿತ್ರ ರಾಷ್ಟ್ರ ನಮ್ಮ ಮೇಲೆ ಸುಂಕ ವಿಧಿಸಲು ನಿರ್ಧರಿಸಿದೆ. ಇದು ನಮ್ಮನ್ನು ಸಂಪೂರ್ಣವಾಗಿ ಧ್ವಂಸಗೊಳಿಸುತ್ತದೆ. ಭಾರತ ಸರ್ಕಾರ ನಮ್ಮ ಭೂಮಿಯ ಬಗ್ಗೆ ಏಕೆ ಮೌನ ವಹಿಸಿದೆ? ಸುಂಕದ ವಿಷಯದ ಬಗ್ಗೆ ನೀವು ಏನು ಮಾಡುತ್ತೀರಿ? ಎಂದು ಪ್ರಶ್ನಿಸಿದ್ದಾರೆ.
ಭಾರತ-ಚೀನಾ ಗಡಿ ಸಮಸ್ಯೆಯನ್ನು ಉಲ್ಲೇಖಿಸಿದ ರಾಯ್‌ಬರೇಲಿ ಸಂಸದ ರಾಹುಲ್ ಗಾಂಧಿ ಬೀಜಿಂಗ್ ಈಗ “ನಮ್ಮ ಪ್ರದೇಶದ 4,000 ಚದರ ಕಿ.ಮೀ.ಗಿಂತ ಹೆಚ್ಚು ಜಾಗವನ್ನು ಆಕ್ರಮಿಸಿಕೊಂಡಿದೆ” ಎಂದು ಹೇಳಿದ್ದಾರೆ.
ವಕ್ಫ್ ತಿದ್ದುಪಡಿ ಮಸೂದೆಯನ್ನು ಟೀಕಿಸಿದ ರಾಹುಲ್ ಗಾಂಧಿ, ಇದು ಮುಸ್ಲಿಮರನ್ನು ಅಂಚಿನಲ್ಲಿಡಲು, ಅವರ ವೈಯಕ್ತಿಕ ಕಾನೂನುಗಳು ಮತ್ತು ಆಸ್ತಿ ಹಕ್ಕುಗಳನ್ನು ದುರ್ಬಲಗೊಳಿಸಲು ಒಂದು ಸಾಧನವಾಗಿದೆ ಎಂದು ಹೇಳಿದರು.