ಇತ್ತೀಚೆಗೆ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 26 ನಾಗರಿಕರುಪ್ರಾಣ ಕಳೆದುಕೊಂಡ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ತೀವ್ರಗೊಂಡಿದೆ. ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಬೆಂಬಲಿತ ಉಗ್ರರು ಈ ದಾಳಿ ನಡೆಸಿರುವುದಾಗಿ ಗುಪ್ತಚರ ಇಲಾಖೆ ದೃಢಪಡಿಸಿದೆ. ಇದೀಗ ಅಮೆರಿಕವು ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಸಂಪೂರ್ಣ ಬೆಂಬಲವನ್ನು ಘೋಷಿಸಿದೆ, ಅಮೆರಿಕದ ಹೌಸ್ ಸ್ಪೀಕರ್ ಮೈಕ್ ಜಾನ್ಸನ್ ಈ ಸಂಬಂಧ ಭರವಸೆ ನೀಡಿದ್ದಾರೆ.
ಅಮೆರಿಕದ ಪ್ರತಿನಿಧಿ ಸಭೆಯಲ್ಲಿ ಮಾತನಾಡಿದ ಸ್ಪೀಕರ್ ಮೈಕ್ ಜಾನ್ಸನ್, ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟಕ್ಕೆ ಬೇಷರತ್ ಬೆಂಬಲವನ್ನು ವ್ಯಕ್ತಪಡಿಸಿ, ಭಾರತ ಭಯೋತ್ಪಾದನೆಯ ವಿರುದ್ಧ ದೃಢವಾಗಿ ನಿಲ್ಲಬೇಕು. ಈ ಪ್ರಯತ್ನಕ್ಕೆ ಸಹಾಯ ಮಾಡಲು ಅಮೆರಿಕವು ಶಕ್ತಿ, ಸಂಪನ್ಮೂಲಗಳು ಮತ್ತು ಗುಪ್ತಚರ ಸಹಕಾರ ಸೇರಿದಂತೆ ಸಾಧ್ಯವಿರುವ ಎಲ್ಲವನ್ನೂ ಒದಗಿಸಲಿದೆ ಎಂದು ಘೋಷಿಸಿದರು. ಟ್ರಂಪ್ ಆಡಳಿತವು ಭಾರತದೊಂದಿಗೆ ಕೈಜೋಡಿಸಿ ಭಯೋತ್ಪಾದನೆಯನ್ನು ಎದುರಿಸಲು ಬದ್ಧವಾಗಿದೆ ಎಂದು ಜಾನ್ಸನ್ ಸ್ಪಷ್ಟಪಡಿಸಿದ್ದಾರೆ.
ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಜಿಯಾಂಗ್ ಜೈಡಾಂಗ್, ಸಂಕಷ್ಟ ಸಮಯದಲ್ಲಿ ಚೀನಾ ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರನ್ನು ಭೇಟಿಯಾದ ಜೈಡಾಂಗ್, ಭಾರತದೊಂದಿಗೆ ನಡೆಯುತ್ತಿರುವ ಸಂಘರ್ಷ ಪರಿಸ್ಥಿತಿಗಳ ಕುರಿತು ದೀರ್ಘವಾಗಿ ಚರ್ಚಿಸಿ, ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸ್ಥಿರತೆ ಖಚಿತಪಡಿಸಿಕೊಳ್ಳಲು ಚೀನಾ ಯಾವಾಗಲೂ ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತದೆ ಎಂದು ಹೇಳಿದ್ದಾರೆ.