2008ರಲ್ಲಿ ಮುಂಬೈ ಮೇಲೆ ನಡೆದಿದ್ದ ಉಗ್ರರ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ತಹಾವುರ್ ರಾಣಾನನ್ನು ಅಮೆರಿಕವು ಭಾರತಕ್ಕೆ ಹಸ್ತಾಂತರಿಸಿದೆ. ಆದರೆ ಆತನಿಗಿಂತ ಮುಖ್ಯವಾಗಿ ಈ ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದವನು ಡೇವಿಡ್ ಕೋಲ್ಮನ್ ಹೆಡ್ಲಿ. 2008ರಲ್ಲಿ ಮುಂಬೈ ದಾಳಿ ನಡೆಸುವ ಸಂಚು ರೂಪಿಸಿದ್ದು ಲಷ್ಕರ್ ಎ ತೊಯ್ಬಾ ಉಗ್ರ ಸಂಘಟನೆ. ಆ ದಾಳಿಯ ಸಂಚನ್ನು ಸಮಗ್ರವಾಗಿ ರೂಪಿಸಿದವನು ಹೆಡ್ಲಿ.
ದಾಳಿ ಎಲ್ಲಿಂದ ಶುರುವಾಗಬೇಕು, ಯಾವ ಕಡೆ ದಾಳಿ ನಡೆಸಬೇಕು, ಯಾವ ಕಟ್ಟಡಗಳ ಮೇಲೆ ದಾಳಿ ನಡೆಸಬೇಕು. ಹೀಗೆ ಎಲ್ಲವನ್ನು ಮುಂಬೈಗೆ ಐದಾರು ಬಾರಿ ಬಂದು ಅಧ್ಯಯನ ಮಾಡಿ ದಾಳಿಯ ನೀಲ ನಕ್ಷೆ ಕೊಟ್ಟಿದ್ದವ ಹೆಡ್ಲಿ. ಲಷ್ಕರ್ ಜೊತೆ ಹಲವು ವರ್ಷ ಒಡನಾಟ ಇಟ್ಟುಕೊಂಡವನು ಆತ. ತಹಾವುರ್ ರಾಣಾ ಈತ ನಿಗೆ ಬೆಂಬಲವಾಗಿದ್ದುಕೊಂಡು ಆತನ ಭಾರತ ಭೇಟಿಯ ವೇಳೆ ಯಾರಿಗೂ ಅನುಮಾನ ಬಾರದಂತೆ ಎಲ್ಲವನ್ನೂ ನಿಭಾಯಿಸಿದ್ದ. ತಾನೂ ಒಮ್ಮೆ ಮುಂಬೈಗೆ ಬಂದು ಹೆಡ್ಲಿ ಕೊಟ್ಟಿರುವ ನೀಲನಕ್ಷೆ ಸರಿಯಾಗಿದೆ ಎಂದು ಖಚಿತಪಡಿಸಿಕೊಂಡಿದ್ದ. ಆತ ಹೇಳಿದ ಕಡೆ ದಾಳಿ ಮಾಡಿದರೆ ಸಾಕಷ್ಟು ಹೆಣಗಳನ್ನು ಉರುಳಿಸಬಹುದು ಎಂದು ಅಂತಿಮ ಅನುಮೋದನೆಯನ್ನು ಲಷ್ಕರ್ ಉಗ್ರರಿಗೆ ನೀಡಿದ್ದ. ಇದರಿಂದಾಗಿಯೇ ರಾಣಾಗಿಂತ ಭಾರತಕ್ಕೆ ಹಸ್ತಾಂತರವಾಗಬೇಕಿದ್ದು ಡೇವಿಡ್ ಹೆಡ್ಲಿ.ಆದರೆ ಅಮೆರಿಕ ಮಾತ್ರ ಆ ಬಗ್ಗೆ ಮೌನವಾಗಿದೆ.
ಮುಂಬೈ ದಾಳಿಯಲ್ಲಿ ಹೆಡ್ಲಿ ರಾಣಾಗಿಂತ ದೊಡ್ಡ ಆರೋಪಿ. ಆದರೆ ಇಲ್ಲಿ ಅಮೆರಿಕ ಕಣ್ಣಾಮುಚ್ಚಾಲೆ ಆಡುತ್ತಿದೆ. ನಿಜವಾದ ಅಪರಾಧಿಯನ್ನು ಬಿಟ್ಟುಕೊಡದೆ ಆತನ ಸಹಾಯಕನನ್ನು ಮಾತ್ರ ಭಾರತಕ್ಕೆ ಹಸ್ತಾಂತರಿಸಿದೆ.