“ಇರಾನ್ ನಮ್ಮ ದೇಶಕ್ಕೆ ಯಾವುದೇ ಬೆದರಿಕೆ ಹಾಕಿಲ್ಲ. ಇಸ್ರೇಲ್ ಒತ್ತಡ ಹೇರಿದ್ದರಿಂದ ಅಮೆರಿಕ ಇರಾನ್ ಮೇಲೆ ದಾಳಿ ನಡೆಸಲು ಕೈಜೋಡಿಸಿತು. ಈ ವಿಚಾರದಲ್ಲಿ ಬಹಳ ಯೋಚನೆ ಮಾಡಿ ನಾನು ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕನ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ” ಎಂದು ಜೋ ಕೆಂಟ್ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕದ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರದ ನಿರ್ದೇಶಕ ಜೋಸೆಫ್ ಕೆಂಟ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಟ್ರಂಪ್ ಅವರ ‘ಮೇಕ್ ಅಮೆರಿಕ ಗ್ರೇಟ್ ಅಗೈನ್’ (MAGA) ಬೆಂಬಲಿಗರಲ್ಲೇ ಒಡಕು ಮೂಡಿಸುವ ಸಾಧ್ಯತೆ ಕಂಡು ಬರುತ್ತಿದೆ.
ಜೋ ಕೆಂಟ್ ರಾಜೀನಾಮೆ ನೀಡಿರುವುದು ಒಳ್ಳೆಯದೇ ಆಯಿತು. ಅವರು ಬಹಳ ಒಳ್ಳೆಯ ವ್ಯಕ್ತಿ ಎಂದು ಭಾವಿಸಿದ್ದೆ. ಅವರು ಯಾವಾಗಲೂ ಭದ್ರತೆಯ ವಿಚಾರದಲ್ಲಿ ದುರ್ಬಲರಾಗಿದ್ದರು. ಅವರು ರಾಜೀನಾಮೆ ನೀಡಿದ್ದೇ ಒಳ್ಳೆಯದಾಯಿತು ಎಂದು ಟ್ರಂಪ್ ಶ್ವೇತಭವನದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಇರಾನ್ ಬೆದರಿಕೆಯೊಡ್ಡಿರಲಿಲ್ಲ ಎಂದು ಅವರು ಹೇಳಿದ್ದರು. ಆದರೆ ಇರಾನ್ ಅಮೆರಿಕಕ್ಕೆ ಮಾತ್ರವಲ್ಲ ಪ್ರತಿಯೊಂದು ದೇಶಕ್ಕೂ ಬೆದರಿಕೆ ಎಂದು ಟ್ರಂಪ್ ಹೇಳಿದ್ದಾರೆ.
ಅಮೆರಿಕದ ಬೆಂಬಲಕ್ಕೆ ನಿಲ್ಲಬೇಕಿದ್ದ ನ್ಯಾಟೋ ದೇಶಗಳು ಯುದ್ಧದಿಂದ ಹಿಂದೆ ಸರಿದಿರುವುದು ಟ್ರಂಪ್ ಆಡಳಿತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಹರ್ಮುಜ್ ಜಲಸಂಧಿಯನ್ನು ಇರಾನ್ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ಟ್ರಂಪ್ ನ್ಯಾಟೋ ದೇಶಗಳ ಸಹಾಯ ಕೋರಿದ್ದರು. ನ್ಯಾಟೋ ರಾಷ್ಟ್ರಗಳು ನಿರಾಕರಿಸಿವೆ. ನ್ಯಾಟೋಗೆ ಮತ್ತು ಈ ಯುದ್ಧಕ್ಕೆ ಸಂಬಂಧವಿಲ್ಲ ಎಂದು ಜರ್ಮನಿ ಹೇಳಿದೆ. ನಾವು ಈ ಯುದ್ಧದಲ್ಲಿ ಪಾಲುದಾರರಲ್ಲ ಎಂದು ಫ್ರಾನ್ಸ್ ಅಧ್ಯಕ್ಷ ಮ್ಯಾಕ್ರನ್ ಪ್ರತಿಕ್ರಿಯಿಸಿದ್ದಾರೆ. ನಮ್ಮದು ಕೇವಲ ರಕ್ಷಣಾತ್ಮಕ ನಿಲುವು ಎಂದು ಯುಕೆ ಪ್ರಧಾನಿ ಸ್ಟಾರ್ಮರ್ ಹೇಳಿದ್ದಾರೆ. ನಮ್ಮನ್ನು ಕೇಳಿ ಈ ಯುದ್ಧ ಆರಂಭಿಸಿಲ್ಲ ಎಂದು ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ ಹೇಳಿದ್ದಾರೆ.
ನ್ಯಾಟೋ ನಿಲುವಿನಿಂದ ಕೆರಳಿರುವ ಟ್ರಂಪ್, “ಇದು ನ್ಯಾಟೋ ಮಾಡುತ್ತಿರುವ ಮೂರ್ಖತನ. ನಮಗೆ ಯಾರ ಸಹಾಯವೂ ಬೇಕಿಲ್ಲ, ನಮ್ಮ ಶಕ್ತಿಯೇ ನಮಗೆ ಸಾಕು., ಏಕಾಂಗಿಯಾಗಿಯಾದರೂ ಹರ್ಮುಜ್ ಜಲಸಂಧಿಯನ್ನು ವಶಪಡಿಸಿಕೊಳ್ಳುವುದಾಗಿ ಸವಾಲು ಹಾಕಿದ್ದಾರೆ. ಇರಾನ್ ವಿರುದ್ಧದ ಕಾರ್ಯಾಚರಣೆಗೆ ಬೆಂಬಲ ನೀಡದ ಚೀನಾದ ಮೇಲೆ ಅಸಮಾಧಾನಗೊಂಡು ಮಾರ್ಚ್ 31 ರಿಂದ ನಿಗದಿಯಾಗಿದ್ದ ಚೀನಾ ಪ್ರವಾಸವನ್ನು ಮುಂದೂಡಿದ್ದಾರೆ.


