ಅಮೆರಿಕ ಸುಂಕ ಏರಿಕೆ ಕ್ರಮದ ಬಳಿಕ ಭಾರತವು ರಷ್ಯಾದಿಂದ ತೈಲ ಖರೀದಿ ಆರಂಭಿಸಿತ್ತು, ಇದೀಗ ರಷ್ಯಾದ ಎರಡು ಪ್ರಮುಖ ತೈಲ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ ಹೇರಿದ ಹಿನ್ನೆಲೆ ಭಾರತದ ತೈಲ ಸಂಸ್ಕರಣಾ ಕಂಪನಿಗಳು ರಷ್ಯಾದಿಂದ ಹೊಸದಾಗಿ ತೈಲ ಖರೀದಿ ನಿಲ್ಲಿಸಿವೆ.
ಅಮೆರಿಕ ನಿರ್ಬಂಧದ ಪರಿಣಾಮ ಗೊಂದಲ ಬಗೆಹರಿಯುವವರೆಗೂ ರಷ್ಯಾದ ರೋಸ್‌ನೆಫ್ಟ್ ಮತ್ತು ಲುಕೋಯಿಲ್‌ನಿಂದ ತೈಲ ಖರೀದಿ ಸ್ಥಗಿತಕ್ಕೆ ಭಾರತ ನಿರ್ಧರಿಸಿದೆ. ಆದರೆ ತಕ್ಷಣದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ಸ್ಪಾಟ್ ಮಾರ್ಕೆಟ್‌ನಿಂದ ತೈಲ ಖರೀದಿಗೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ ನಿರ್ಧರಿಸಿದೆ. ದೇಶದ ಅತಿದೊಡ್ಡ ಖಾಸಗಿ ತೈಲ ಸಂಸ್ಕರಣ ಘಟಕ ರಿಲಯನ್ಸ್ ತಾತ್ಕಾಲಿಕ ಖರೀದಿಯತ್ತ ಚಿಂತನೆ ನಡೆಸಿದೆ.
ರಷ್ಯಾದ ಒಟ್ಟು ತೈಲ ರಫ್ತಿನ ಪ್ರಮಾಣದಲ್ಲಿ ಭಾರತ ಶೇ.40 ತೈಲವನ್ನು ಖರೀದಿಸುತ್ತಿತ್ತು. ಆದರೆ ಕಠಿಣ ನಿಯಮಗಳ ಕಾರಣದಿಂದ ಏಪ್ರಿಲ್- ಸೆಪ್ಟೆಂಬರ್ ನಡುವೆ ಖರೀದಿ ಪ್ರಮಾಣ ಶೇ.8.4 ಕುಸಿದಿತ್ತು. ಇನ್ನು ನಿರ್ಬಂಧದಿಂದಾಗಿ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಯಿದೆ.
ಶೀಘ್ರವೇ ನಾವು ಭಾರತದೊಂದಿಗೆ ವ್ಯಾಪಾರ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಒಂದು ವೇಳೆ ಒಪ್ಪಂದ ಏರ್ಪಟ್ಟರೆ ಎರಡೂ ದೇಶಗಳ ನಡುವಿನ ತೆರಿಗೆ ಸಮರಕ್ಕೆ ಅಂತಿಮ ತೆರೆ ಬೀಳುವ ಸಾಧ್ಯತೆ ಇದೆ. ಕೃಷಿ, ಹೈನುಗಾರಿಕೆ ವಲಯವನ್ನು ಮುಕ್ತ ಮಾಡಲು ಭಾರತ ಒಪ್ಪುತ್ತಿಲ್ಲ. ಹೀಗಾಗಿ ವ್ಯಾಪಾರ ಒಪ್ಪಂದ ಪ್ರಕ್ರಿಯೆ ಕೂಡ ವಿಳಂಬವಾಗುತ್ತಿದೆ.


