ಭಾರತದ 112 ಅಕ್ರಮ ವಲಸಿಗರನ್ನು ಹೊತ್ತ ಅಮೆರಿಕದ ಮೂರನೇ ವಿಮಾನ ಭಾನುವಾರ ರಾತ್ರಿ ಪಂಜಾಬ್ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಶನಿವಾರ ಎರಡನೇ ವಿಮಾನದಲ್ಲಿ 119 ಅಕ್ರಮ ವಲಸಿಗರನ್ನು ಕರೆತಂದಿದ ಅಮೆರಿಕದ ವಿಮಾನ ಭಾನುವಾರ ರಾತ್ರಿ 10.10ರ ಸುಮಾರಿಗೆ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು. ಈ ಮೂಲಕ ಭಾರತಕ್ಕೆ ಗಡಿಪಾರು ಮಾಡಲಾದ ಭಾರತೀಯರ ಸಂಖ್ಯೆ 335ಕ್ಕೆ ಏರಿಕೆಯಾದಂತಾಗಿದೆ.
ಈ ಬಾರಿ ಬಂದಿಳಿದ ಸಿಎಸ್-7 ವಿಮಾನದಲ್ಲಿ ಪಂಜಾಬ್ ನ 31, ಹರಿಯಾಣದ 44, ಗುಜರಾತ್ ನ 33, ಉತ್ತರ ಪ್ರದೇಶದ ಇಬ್ಬರು, ಹಿಮಾಚಲ ಪ್ರದೇಶ ಮತ್ತು ಉತ್ತರಾಖಂಡ್ ನ ತಲಾ ಒಬ್ಬರು ಇದ್ದರು ಎಂದು ಹೇಳಲಾಗಿದೆ.
ಅಕ್ರಮ ವಲಸಿಗರನ್ನು ಕರೆತರಲು ವಿಮಾನ ನಿಲ್ದಾಣಕ್ಕೆ ಕೆಲವು ಕುಟುಂಬಗಳು ಆಗಮಿಸಿದ್ದವು. ಅಮೆರಿಕದ ಅಧ್ಯಕ್ಷರಾಗಿ ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಅಕ್ರಮವಾಗಿ ನುಸುಳಿದವರನ್ನು ಹೊರಹಾಕುವ ಕಾರ್ಯಕ್ರಮ ಆರಂಭವಾಗಿದ್ದು, ವಿವಿಧ ದೇಶಗಳ ಅಕ್ರಮ ವಲಸಿಗರನ್ನು ವಾಪಸ್ ಕಳುಹಿಸುವ ಕೆಲಸ ಭರದಿಂದ ಸಾಗಿದೆ.
ಮೊದಲ ಕಂತಿನಲ್ಲಿ ಭಾರತದ 102 ಮಂದಿ ಅಕ್ರಮ ವಲಸಿಗರನ್ನು ಕಳುಹಿಸಿಕೊಡಲಾಗಿತ್ತು. ಶನಿವಾರ ಎರಡನೇ ವಿಮಾನದಲ್ಲಿ 119 ಮಂದಿ ಬಂದಿಳಿದಿದ್ದರೆ ಇದೀಗ ಮೂರನೇ ವಿಮಾನದಲ್ಲಿ 112 ಮಂದಿಯನ್ನು ಕರೆ ತರಲಾಗಿದೆ. ಅಮೆರಿಕದಲ್ಲಿ ಭಾರತೀಯ ಅಕ್ರಮ ವಲಸಿಗರ ಸಂಖ್ಯೆ 487 ಇದೆ ಎಂದು ಕೇಂದ್ರ ಸಚಿವಾಲಯ ಮಾಹಿತಿ ನೀಡಿತ್ತು.