ಅಮೆರಿಕ ಸೇನೆಯಿಂದ ಇರಾನ್ ನಾಯಕ ಅಲಿ ಖಮೇನಿ ಹತ್ಯೆ ಬಳಿಕ ಆ ಸ್ಥಾನಕ್ಕೆ ಏರಿದ ಮೊಜ್ತಾಬಾ ಖಮೇನಿಯನ್ನು ಮುಗಿಸಲು ಮುಂದಾಗಿರುವ ಅಮೆರಿಕ ಅವರ ಸುಳಿವು ನೀಡಿದವರಿಗೆ 10 ಮಿಲಿಯನ್ ಡಾಲರ್ (92.47 ಕೋಟಿ ರೂಪಾಯಿ) ನಗದು ಬಹುಮಾನ ನೀಡುವುದಾಗಿ ಘೋಷಿಸಿದೆ.
ಅಮೆರಿಕದ ಡಿಪ್ಲೊಮ್ಯಾಟಿಕ್ ಸೆಕ್ಯುರಿಟಿ ಸರ್ವಿಸ್ ‘ರಿವಾರ್ಡ್ಸ್ ಫಾರ್ ಜಸ್ಟೀಸ್’ (RFJ) ಅಭಿಯಾನದನ್ವಯ ಮೊಜ್ತಾಬಾ ಖಮೇನಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಸಂಬಂಧಿಸಿದ ಹಲವು ಉನ್ನತ ಅಧಿಕಾರಿಗಳ ಭಾವಚಿತ್ರಗಳನ್ನು ಬಿಡುಗಡೆ ಮಾಡಿದೆ. ಈ ವ್ಯಕ್ತಿಗಳು ಜಾಗತಿಕವಾಗಿ ಭಯೋತ್ಪಾದಕ ಚಟುವಟಿಕೆಗಳನ್ನು ಯೋಜಿಸುವ ಮತ್ತು ಕಾರ್ಯಗತಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂಬುದು ಅಮೆರಿಕ ಆರೋಪಿಸಿದೆ.
ಖಮೇನಿ ಸೇರಿದಂತೆ ಪಟ್ಟಿಯಲ್ಲಿರುವ ವ್ಯಕ್ತಿಗಳ ಮಾಹಿತಿ ನೀಡುವವರ ಗೌಪ್ಯತೆಯನ್ನು ಕಾಪಾಡಲು ಟಾರ್ ಆಧಾರಿತ ಟಿಪ್ಲೈನ್ ಅಥವಾ ಸಿಗ್ನಲ್ ಆ್ಯಪ್ ಮೂಲಕ ಮಾಹಿತಿ ಹಂಚಿಕೊಳ್ಳಲು ಸೂಚಿಸಲಾಗಿದೆ.
ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್ನ ನಾಯಕ ಅಲಿ ಖಮೇನಿ ಅವರನ್ನು ಹತ್ಯೆ ಮಾಡಲಾಗಿತ್ತು. ನಂತರ ಇರಾನ್ ಮೇಲೆ ಅಮೆರಿಕ ದಾಳಿ ಮುಂದುವರಿದಿದೆ. ಈವರೆಗೆ ಐಆರ್ಜಿಸಿಯ ಸೇನಾ ನೆಲೆಗಳು, ಕಚೇರಿಗಳು ಮತ್ತು ಶಸ್ತ್ರಾಸ್ತ್ರ ತಯಾರಿಕಾ ಕಾರ್ಖಾನೆಗಳು ಸೇರಿದಂತೆ ಒಟ್ಟು 15,000 ಕ್ಕೂ ಹೆಚ್ಚು ಗುರಿಗಳನ್ನು ಧ್ವಂಸಗೊಳಿಸಲಾಗಿದೆ.


