ಟೆಹ್ರಾನ್: ಇರಾನ್ ಮೇಲೆ ದಾಳಿ ನಡೆಸಲು ಅಮೆರಿಕದ ಸೇನೆ ಮುನ್ನುಗ್ಗುತ್ತಿದ್ದು, ಇಸ್ರೇಲ್ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.
ಜಾಗತಿಕ ಮಟ್ಟದಲ್ಲಿ ಅಮೆರಿಕ ಒತ್ತಡ ಹೇರುತ್ತಿರುವ ಬಗ್ಗೆ ಕೆನಡಾ ವಿರೋಧಿಸಿದ ಹಿನ್ನೆಲೆಯಲ್ಲಿ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಲ್ಬಣಗೊಂಡಿದ್ದು, ಈ ಹಿನ್ನೆಲೆಯಲ್ಲಿ ಗುರುವಾರ ನಡೆಯಬೇಕಿದ್ದ ಶಾಂತಿ ಮಂಡಳಿ ಸಭೆಯನ್ನು ಅಮೆರಿಕ ರದ್ದುಗೊಳಿಸಿತು.
ಗಾಜಾ ಗಡಿಯಲ್ಲಿ ಶಾಂತಿ ನೆಲಸುವ ಕುರಿತು ಅಮೆರಿಕ ಕರೆದಿದ್ದ ಶಾಂತಿ ಮಂಡಳಿ ಸಭೆಗೆ ಆರಂಭದಲ್ಲೇ ಹಿನ್ನಡೆ ಉಂಟಾಗಿದೆ. ಇದರ ಬೆನ್ನಲ್ಲೇ ಅಮೆರಿಕ ಸೇನೆ ಇರಾನ್ ನತ್ತ ಮುನ್ನುಗ್ಗುತ್ತಿದ್ದು, ಯುದ್ಧದ ಭೀತಿ ಆವರಿಸಿದೆ.
ಇರಾನ್ ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳ ಮೇಲೆ ಹಿಂಸಾತ್ಮಕ ಕ್ರಮ ಕೈಗೊಳ್ಳುವ ಬಗ್ಗೆ ಅಮೆರಿಕ ಎಚ್ಚರಿಕೆ ನೀಡಿದ್ದು, ಮುಂಬರುವ ದಿನಗಳಲ್ಲಿ ಅರೇಬಿಯನ್ ಸಮುದ್ರ ಅಥವಾ ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿ ಯುಎಸ್ಎಸ್ ಅಬ್ರಹಾಂ ಲಿಂಕನ್ ಮತ್ತು ಮಾರ್ಗದರ್ಶಿ-ಕ್ಷಿಪಣಿ ವಿಧ್ವಂಸಕಗಳ ವಿಮಾನವಾಹಕ ನೌಕೆ ದಾಳಿ ಗುಂಪನ್ನು ನಿರೀಕ್ಷಿಸಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.
2024ರಲ್ಲಿ ಇಸ್ರೇಲ್ ಮೇಲೆ ಇರಾನ್ ನಡೆಸಿದ ಡ್ರೋಣ್ ಹಾಗೂ ಕ್ಷಿಪಣಿ ದಾಳಿಗಳನ್ನು ಹತ್ತಿಕ್ಕಲು ಅಮೆರಿಕ ಬಳಸಿದ್ದ ಎಫ್-15 ಇ, ಸ್ಟೈಟ್ ಈಗಲ್ ಫೈಟರ್ ಜೆಟ್ ಸೇರಿದಂತೆ ಹಲವು ಯುದ್ಧ ವಿಮಾನಗಳು ಮಧ್ಯಪ್ರಾಚ್ಯದತ್ತ ಧಾವಿಸುತ್ತಿವೆ.
ಈಗಾಗಲೇ ಚೀನಾ ಸಾಗರದಲ್ಲಿ ನಿಯೋಜಿಸಲಾಗಿದ್ದ ಯುದ್ಧ ವಿಮಾನಗಳ ನೆಲೆ ನೀಡುವ ಯುದ್ಧದ ಹಡಗುಗಳು ಮಧ್ಯಪ್ರಾಚ್ಯದತ್ತ ಸಾಗಿದ್ದು, ಈ ಎಲ್ಲಾ ಬೆಳವಣಿಗೆಗಳನ್ನು ಇಸ್ರೇಲ್ ಗಮನಿಸುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಯುದ್ಧ ದೀರ್ಘಾವಧಿ ನಡೆಯುವುದಿಲ್ಲ ಎಂದು ಹೇಳಿಕೆ ನೀಡಿರುವುದು ಕೂಡ ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿಗೆ ಕಾರಣವಾಗಿದೆ.
ಇದೇ ವೇಳೆ ಅಮೆರಿಕದ ಮಾಧ್ಯಮಗಳು ಕೂಡ ಕ್ಷಿಪಣಿ ನಿರೋಧಕ ಥಾಡ್ ಮತ್ತು ಪೇಟ್ರಿಯಾಟ್ ಮುಂತಾದ ರಕ್ಷಣಾ ವ್ಯವಸ್ಥೆಗಳನ್ನು ಸಾಗಿಸುತ್ತಿದ್ದು, ಇವುಗಳು ಇಸ್ರೇಲ್ ಮತ್ತು ಕತಾರ್ ನಲ್ಲಿ ನಿಯೋಜನೆಗೊಳ್ಳುವ ಸಾಧ್ಯತೆ ಇದೆ ಎಂದು ವರದಿ ಮಾಡಿವೆ.
ಈಗಾಗಲೇ ಇರಾನ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ 3000ಕ್ಕೂ ಅಧಿಕ ಪ್ರತಿಭಟನಾಕಾರರು ಮೃತಪಟ್ಟಿದ್ದು, ಈ ಹತ್ಯಾಕಾಂಡದ ಹಿಂದೆ ಭಯೋತ್ಪಾದಕರು ಹಾಗೂ ಹೊರಗಿನ ಶಕ್ತಿಗಳು ಕಾರಣ ಎಂದು ಆರೋಪಿಸಿರುವ ಇರಾನ್, ಈ ಬಾರಿ ನಮ್ಮ ಗುರಿ ತಪ್ಪುವುದಿಲ್ಲ. ನಾವು ಸಜ್ಜಾಗಿದ್ದೇವೆ ಎಂದು ಅಮೆರಿಕಕ್ಕೆ ತಿರುಗೇಟು ನೀಡಿತ್ತು.


