ಇರಾನ್ ಸಂಸತ್ ಸ್ಪೀಕರ್ ಮೊಹಮ್ಮದ್ ಬಕರ್ ಗಾಲಿಬಾಫ್ ಮತ್ತು ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಸೇರಿದಂತೆ ಹಿರಿಯ ನಾಯಕರನ್ನು ಹತ್ಯೆ ಮಾಡಲು ಅಮೆರಿಕ ಮತ್ತು ಇಸ್ರೇಲ್ ಯೋಜನೆ ರೂಪಿಸಿರುವುದಾಗಿ ಇರಾನ್ ವಿಶ್ವಸಂಸ್ಥೆಗೆ ಅಧಿಕೃತವಾಗಿ ಮಾಹಿತಿ ನೀಡಿದೆ ಎಂದು ಮಾಧ್ಯಮ ವರದಿ ಮಾಡಿದೆ.
ಇರಾನ್‌ನ ರಾಯಭಾರಿ ಮತ್ತು ವಿಶ್ವಸಂಸ್ಥೆಯ ಖಾಯಂ ಪ್ರತಿನಿಧಿ ಅಮೀರ್ ಸಯೀದ್ ಇರಾವನಿ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಮತ್ತು ಭದ್ರತಾ ಮಂಡಳಿಯ ಅಧ್ಯಕ್ಷರಿಗೆ ಬರೆದ ಅಧಿಕೃತ ಪತ್ರದಲ್ಲಿ ಹತ್ಯೆ ಸಂಚುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬಗ್ಗೆ ನಾನು ನಿಮಗೆ ಮತ್ತು ಭದ್ರತಾ ಮಂಡಳಿಯ ಸದಸ್ಯರ ಗಮನ ಸೆಳೆಯುತ್ತೇನೆ. ಅಮೆರಿಕ ಮತ್ತು ಇಸ್ರೇಲ್ ಆಡಳಿತವು, ಇಸ್ಲಾಮಿಕ್ ಸಮಾಲೋಚನಾ ಸಭೆಯ ಸ್ಪೀಕರ್ ಮೊಹಮ್ಮದ್ ಬಕರ್ ಖಲಿಬಾಫ್ ಮತ್ತು ವಿದೇಶಾಂಗ ಸಚಿವ ಸಯ್ಯದ್ ಅಬ್ಬಾಸ್ ಅರಘ್ಚಿ ಸೇರಿದಂತೆ ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ಉನ್ನತ ನಾಯಕರನ್ನು ಹತ್ಯೆ ಮಾಡುವುದಾಗಿ ಹೇಳುತ್ತಿವೆ. ಈ ನೀತಿ ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ ಎಂದು ಇರಾವನಿ ತಿಳಿಸಿದ್ದಾರೆ.
ಇರಾನ್ ಜೊತೆಗಿನ ಮಾತುಕತೆಗಳ ಹೊರತಾಗಿಯೂ, ಪಶ್ಚಿಮ ಏಷ್ಯಾದಲ್ಲಿ ಹೆಚ್ಚುವರಿಯಾಗಿ 10,000 ಭೂಸೇನಾ ಪಡೆಗಳನ್ನು ಕಳುಹಿಸುವ ಬಗ್ಗೆ ಅಮೆರಿಕ ಚಿಂತಿಸುತ್ತಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿಯನ್ನು ಉಲ್ಲೇಖಿಸಿ ದಿ ಜೆರುಸಲೆಮ್ ಪೋಸ್ಟ್ ತಿಳಿಸಿದೆ.
ಈ ನಿಯೋಜನೆಯು ಈಗಾಗಲೇ ಈ ಪ್ರದೇಶಕ್ಕೆ ನಿಯೋಜಿಸಲಾಗಿರುವ 82ನೇ ವಾಯುಗಾಮಿ ವಿಭಾಗದ ಜೊತೆಗೆ ಪದಾತಿ ದಳ ಮತ್ತು ಶಸ್ತ್ರಸಜ್ಜಿತ ವಾಹನಗಳನ್ನು ಒಳಗೊಂಡಿರಬಹುದೆಂದು ಹೇಳಿದೆ.


