Menu

ಡೊನಾಲ್ಡ್ ಟ್ರಂಪ್ ಸುಂಕ ನೀತಿ ಖಂಡನೀಯವೆಂದ ಅಮೆರಿಕ ಅರ್ಥಶಾಸ್ತ್ರಜ್ಞ

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿ ಖಂಡನೀಯ ಎಂದು ಅಲ್ಲಿನ ಆರ್ಥಿಕ ತಜ್ಞರು ಟೀಕಿಸಿದ್ದಾರೆ. ಈ ಬಗ್ಗೆ ಎನ್​ಡಿಟಿವಿ ಜತೆಗೆ ಮಾತನಾಡಿದ ಅಮೆರಿಕದ ಅರ್ಥಶಾಸ್ತ್ರಜ್ಞ ಮತ್ತು ಜಾನ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಸ್ಟೀವ್ ಹ್ಯಾಂಕೆ, ಡೊನಾಲ್ಡ್ ಟ್ರಂಪ್ ವಿಶ್ವದ ಇತರ ಭಾಗಗಳ ವಿರುದ್ಧ ವ್ಯಾಪಾರ ಯುದ್ಧವನ್ನು ಪ್ರಾರಂಭಿಸುವ ಮೂಲಕ ತಮ್ಮನ್ನು ತಾವು ನಾಶಪಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಟ್ರಂಪ್ ಅವರ ಸುಂಕ ನಿರ್ಧಾರವು ಸಂಪೂರ್ಣವಾಗಿ ಅಸಂಬದ್ಧ ಮತ್ತು ಮರಳಿನ ಮೇಲೆ ಆಧಾರಿತ. ಟ್ರಂಪ್​​ ಅವರ ಅರ್ಥಶಾಸ್ತ್ರವು ಸಂಪೂರ್ಣವಾಗಿ ತಪ್ಪಾಗಿದೆ ಎಂದು ಎಂದು ಸ್ಟೀವ್ ಹ್ಯಾಂಕೆ ಹೇಳಿದ್ದಾರೆ. ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ಹೆಚ್ಚಿಸಿದ್ದಕ್ಕೆ ವ್ಯಾಪಕ ಚರ್ಚೆಗಳು ನಡೆಯುತ್ತಿದೆ. ಈ ನಡುವೆ ಸ್ಟೀವ್ ಹ್ಯಾಂಕೆ ಹೇಳಿಕೆ ನೀಡಿರುವುದು ಇನ್ನಷ್ಟು ಚರ್ಚೆಗೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್. ಜೈಶಂಕರ್ ಈ ವಿಚಾರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ, ಸ್ವಲ್ಪ ಕಾಯುವುದು ಒಳ್ಳೆಯದು ಎಂದು ಸ್ಟೀವ್ ಹ್ಯಾಂಕೆ ತಿಳಿಸಿದ್ದಾರೆ.

ಟ್ರಂಪ್​​ ನೀತಿಯಿಂದ ಅಮೆರಿಕದ ಮೇಲೆ ಭಾರತ ಸೇರಿದಂತೆ ವಿಶ್ವ ಅನೇಕ ಬಲಿಷ್ಠ ರಾಷ್ಟ್ರಗಳು ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಟ್ರಂಪ್​ ಅವರ ಈ ಸುಂಕಗಳ ಮೇಲಿನ ಆರ್ಥಿಕತೆ ಮರಳಿನ ಮೇಲೆ ನಿಂತಿದೆ. ಅಮೆರಿಕನ್ನರ ಖರ್ಚು ಒಟ್ಟು ರಾಷ್ಟ್ರೀಯ ಉತ್ಪನ್ನಕ್ಕಿಂತ ಹೆಚ್ಚಿರುವುದರಿಂದ ಅಮೆರಿಕದಲ್ಲಿ ಭಾರಿ ವ್ಯಾಪಾರ ಕೊರತೆ ಇದೆ. ಟ್ರಂಪ್ ಅವರ ಸುಂಕ ಅರ್ಥಶಾಸ್ತ್ರವು ಸಂಪೂರ್ಣವಾಗಿ ಅಸಂಬದ್ಧವಾಗಿದೆ ಎಂದು ಹೇಳಿದ್ದಾರೆ.

ಭಾರತದ ಸರಕುಗಳ ಮೇಲೆ ಹೆಚ್ಚುವರಿಯಾಗಿ ಶೇಕಡಾ 25 ರಷ್ಟು ಸುಂಕವನ್ನು ವಿಧಿಸುವ ಮೂಲಕ ಮತ್ತು ಅದನ್ನು ಶೇಕಡಾ 50 ಕ್ಕೆ ದ್ವಿಗುಣಗೊಳಿಸುವ ಮೂಲಕ ಭಾರತದ ವಿರುದ್ಧ ಟ್ರಂಪ್‌ ಸುಂಕದ ದಾಳಿ ನಡೆಸಿದ್ದಾರೆ. ಜವಳಿ, ಸಾಗರ ಮತ್ತು ಚರ್ಮದ ರಫ್ತುಗಳಂತಹ ಕ್ಷೇತ್ರಗಳ ಮೇಲೆ ಇದು ತೀವ್ರ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ಅನ್ಯಾಯಯುತ, ನ್ಯಾಯಸಮ್ಮತವಲ್ಲದ ಮತ್ತು ಅವಿವೇಕದ ಕ್ರಮವೆಂದು ಭಾರತ ಖಂಡಿಸಿದೆ.

Related Posts

Leave a Reply

Your email address will not be published. Required fields are marked *