Menu

ಏಡ್ಸ್‌ ರೋಗಿಗಳಿಗೆ ಅಮೆರಿಕ ನೆರವು ಸ್ಥಗಿತ: 40 ಲಕ್ಷಕ್ಕೂ ಅಧಿಕ  ಜಾಗತಿಕ ಸಾವಿನ ಭೀತಿ

ಅಮೆರಿಕದ ತುರ್ತು ಏಡ್ಸ್ ಪರಿಹಾರ ಯೋಜನೆಯಡಿ ನೀಡುತ್ತಿದ್ದ ಹಣವನ್ನು ಏಕಾಏಕಿ ನಿಲ್ಲಿಸಿರುವ ಕಾರಣ ಏಡ್ಸ್ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಯಲ್ಲಿ ದೊಡ್ಡ ವ್ಯತ್ಯಯ ಉಂಟಾಗಿದ್ದು. ಲಕ್ಷಾಂತರ ಜನ ಇದರಿಂದ ಸಾಯುವ ಭೀತಿ ಎದುರಾಗಿದೆ.  ವಿಶ್ವಸಂಸ್ಥೆಯ ಯುಎನ್‌ ಏಡ್ಸ್‌ ನ 2025ರ ಗ್ಲೋಬಲ್ ಏಡ್ಸ್ ವರದಿಯ ಪ್ರಕಾರ, ನಿಧಿ ಕೊರತೆಯಿಂದ 2029ರ ವೇಳೆಗೆ 40 ಲಕ್ಷಕ್ಕೂ ಅಧಿಕ ಏಡ್ಸ್ ಸಾವುಗಳು ಸಂಭವಿಸಬಹುದಾಗಿದೆ.

ಕಳೆದ ಆರು ತಿಂಗಳಿಂದ ಅಮೆರಿಕದ ನೆರವಿನ ನಿಧಿಯ ನಿಲುಗಡೆಯಿಂದ ಸಾವಿರಾರು ಆರೋಗ್ಯ ಕಾರ್ಯಕರ್ತರನ್ನು ಕೆಲಸದಿಂದ ತೆಗೆದುಹಾಕಲಾಗಿದ್ದು, ಏಡ್ಸ್ ತಡೆಗಟ್ಟುವ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ.  ಇದರಿಂದ ಮಕ್ಕಳು ಮತ್ತು ಗರ್ಭಿಣಿಯರಿಗೆ ಚಿಕಿತ್ಸೆ ತಲುಪದಿರುವುದು ಗಂಭೀರ ಸಮಸ್ಯೆಯಾಗಿದೆ.

ಅಮೆರಿಕದ ತುರ್ತು ಏಡ್ಸ್ ಪರಿಹಾರ ಯೋಜನೆ 2003ರಿಂದ 26 ಮಿಲಿಯನ್ ಜೀವಗಳನ್ನು ಉಳಿಸಿದೆ. ಆದರೆ, ಟ್ರಂಪ್ ಆಡಳಿತದಿಂದ ಈ ಯೋಜನೆಗೆ ನಿಧಿ ಕಡಿತಗೊಂಡಿದ್ದು, 2029ರ ವೇಳೆಗೆ 60 ಲಕ್ಷ ಹೊಸ ಎಚ್‌ಐವಿ ಸೋಂಕುಗಳು ಮತ್ತು 42 ಲಕ್ಷ ಏಡ್ಸ್ ಸಂಬಂಧಿತ ಸಾವುಗಳು ಸಂಭವಿಸಬಹುದು ಎಂದು ಯುಎನ್‌ ಏಡ್ಸ್ ಎಚ್ಚರಿಸಿದೆ.

2024ರಲ್ಲಿ 92 ಲಕ್ಷ ಜನರು ಎಚ್‌ಐವಿ ಚಿಕಿತ್ಸೆಯಿಂದ ವಂಚಿತರಾಗಿದ್ದರು, ಇದರಲ್ಲಿ 6.2 ಲಕ್ಷ ಮಕ್ಕಳು ಸೇರಿದ್ದಾರೆ. ಇದರಿಂದ 2024ರಲ್ಲಿ 6.3 ಲಕ್ಷ ಏಡ್ಸ್ ಸಂಬAಧಿತ ಸಾವುಗಳು ಸಂಭವಿಸಿದ್ದು, ಇದರ 61% ಸಬ್-ಸಹಾರನ್ ಆಫ್ರಿಕಾದಲ್ಲಿವೆ.    ಯುಎಸ್‌ಎಐಡಿ ಕಾರ್ಯಕ್ರಮಗಳು 2001-2021ರ ಅವಧಿಯಲ್ಲಿ 91 ಮಿಲಿಯನ್ ಜೀವಗಳನ್ನು ಉಳಿಸಿದ್ದವು, ಆದರೆ 2025ರಲ್ಲಿ 83% ಕಾರ್ಯಕ್ರಮಗಳ ಕಡಿತದಿಂದ 2030ರ ವೇಳೆಗೆ 14 ಮಿಲಿಯನ್ ಹೆಚ್ಚುವರಿ ಸಾವುಗಳು, ಇದರಲ್ಲಿ 45 ಲಕ್ಷ ಮಕ್ಕಳ ಸಾವುಗಳು ಸಂಭವಿಸಬಹುದು.

ಈ ಬೆಳವಣಿಗೆಯಿಂದ ಜಾಗತಿಕ ಏಡ್ಸ್  ತಡೆ ಪ್ರಕ್ರಿಯೆಯಲ್ಲಿ ಭಾರಿ ಅಡೆತಡೆಯಾಗಿದೆ ಎಂದು ಈ ಕೊರತೆಯನ್ನು “ಟೈಮ್ ಬಾಂಬ್” ಎಂದು ಯುಎನ್‌ಎ ಏಡ್ಸ್ ಕಾರ್ಯನಿರ್ವಾಹಕ ನಿರ್ದೇಶಕರಾದ ವಿನ್ನಿ ಬಯಾನಿಮಾ ವಿವರಿಸಿದ್ದಾರೆ. ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಈ ಕಡಿತಗಳಿಂದ ಯಾರೂ ಸಾಯುತ್ತಿಲ್ಲ ಎಂದು ವಾದಿಸಿದ್ದಾರೆ, ಆದರೆ ಆರೋಗ್ಯ ತಜ್ಞರು ಈ ಹೇಳಿಕೆಯನ್ನು ಒಪ್ಪಲಾಗದು ಎಂದಿದ್ದಾರೆ. ಬೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕ ಬ್ರೂಕ್ ನಿಕೋಲ್ಸ್, ಈ ಕಡಿತಗಳಿಂದ ಪ್ರತಿ ಗಂಟೆಗೆ 88 ಸಾವುಗಳು ಸಂಭವಿಸುತ್ತಿವೆ ಎಂದು ಅಂದಾಜಿಸಿದ್ದಾರೆ.

ಕಡಿಮ-ಮಧ್ಯಮ ಆದಾಯದ ರಾಷ್ಟ್ರಗಳಲ್ಲಿ 25 ರಾಷ್ಟ್ರಗಳು 2026ರಲ್ಲಿ ಎಚ್‌ಐವಿ ಕಾರ್ಯಕ್ರಮಗಳಿಗೆ ದೇಶೀಯ ಬಜೆಟ್‌ನಲ್ಲಿ ಹೆಚ್ಚಳವನ್ನು ಘೋಷಿಸಿವೆ. ಆದರೆ ಇದು ಅಂತಾರಾಷ್ಟ್ರೀಯ ನಿಧಿಯ ಕೊರತೆಯನ್ನು ನೀಗಲು ಸಾಕಾಗುವುದಿಲ್ಲ. ಯುರೋಪಿಯನ್ ರಾಷ್ಟ್ರಗಳು ಕೂಡ ತಮ್ಮ ಮಾನವೀಯ ನೆರವಿನ ಬಜೆಟ್‌ನಲ್ಲಿ ಕಡಿತಗೊಳಿಸಿವೆ, ಇದು ಜಾಗತಿಕ ಆರೋಗ್ಯ ಕಾರ್ಯಕ್ರಮಗಳಿಗೆ ಮತ್ತಷ್ಟು ಸವಾಲು ಒಡ್ಡಿದೆ. 2025ರ ಗ್ಲೋಬಲ್ ಏಡ್ಸ್ ಅಪ್‌ಡೇಟ್ ವರದಿಯು ದೇಶಗಳು ಎಚ್‌ಐವಿಗೆ ಧನಸಹಾಯದಲ್ಲಿ ಆಮೂಲಾಗ್ರ ಬದಲಾವಣೆಗಳನ್ನು ಮಾಡದಿದ್ದರೆ ದಶಕಗಳ ಪ್ರಗತಿಯನ್ನು ಇಲ್ಲವಾಗಿಸುವ ಸಾಧ್ಯತೆ ಇದೆ ಎಂದ ಹೇಳಲಾಗಿದೆ.

Related Posts

Leave a Reply

Your email address will not be published. Required fields are marked *