ಅಕ್ರಮ ವಲಸಿಗರನ್ನು ಹೊರಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇದೀಗ ಅಮೆರಿಕ ಪೌರತ್ವ ಬಯಸುವವರು 5 ದಶಲಕ್ಷ ಡಾಲರ್ (ಅಂದಾಜು 45 ಕೋಟಿ ರೂ.) ನೀಡಿ ಗೋಲ್ಡನ್ ಕಾರ್ಡ್ ಪಡೆಯವಂತೆ ಶ್ರೀಮಂತರಿಗೆ ಆಹ್ವಾನ ನೀಡಿದ್ದಾರೆ.
ಈಗಾಗಲೇ ಕಠಿಣ ವಲಸೆ ನೀತಿಯಿಂದ ಅಕ್ರಮ ವಲಸಿಗರನ್ನು ದೇಶದಿಂದಲೇ ಹೊರಹಾಕುತ್ತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಶ್ರೀಮಂತ ವಲಸಿಗರಿಗೆ ಹೊಸ ಯೋಜನೆ ಜಾರಿಗೆ ತರಲು ಮುಂದಾಗಿದ್ದಾರೆ. ಶ್ರೀಮಂತ ವಲಸಿಗರಿಗೆ ʻಗೋಲ್ಡ್ ಕಾರ್ಡ್ʼಗಳ ಮೂಲಕ, ಅಮೆರಿಕನ್ ಪೌರತ್ವ ಪಡೆಯುವುದನ್ನು ಸುಲಭಗೊಳಿಸುವುದಾಗಿ ಘೋಷಿಸಿದ್ದಾರೆ.
ಅಮೆರಿಕದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ದೊಡ್ಡ ಮೊತ್ತದ ಹಣವನ್ನು ಹೂಡಿಕೆ ಮಅಡುವ ವಿದೇಶಿ ಹೂಡಿಕೆದಾರರಿಗೆ ಮಾತ್ರ ಅಮೆರಿಕದ ಶಾಶ್ವತ ನಿವಾಸಿಗಳಾಗಲು ಅನುವು ಮಾಡಿಕೊಡುವ EB-5 ವೀಸಾ ಯೋಜನೆಯನ್ನು ಗೋಲ್ಡ್ ಕಾರ್ಡ್ನೊಂದಿಗೆ ಬದಲಾಯಿಸಲಾಗುವುದು ಎಂದು ಅವರು ಹೇಳಿದ್ದಾರೆ.
ಗೋಲ್ಡ್ ಕಾರ್ಡ್ಗಳು ಈಗಾಗಲೇ ಅಸ್ತಿತ್ವದಲ್ಲಿರುವ ಗ್ರೀನ್ ಕಾರ್ಡ್ ನಿವಾಸಿಗಳು ಮತ್ತು ಹೊಸ ವಿದೇಶಿಯರಿಗೆ ಅಮೆರಿಕನ್ ಪೌರತ್ವದ ಮಾರ್ಗವನ್ನು ಮತ್ತಷ್ಟು ಸುಲಭಗೊಳಿಸಲಿದೆ. ಸುಮಾರು 1 ದಶಲಕ್ಷ ಗೋಲ್ಡ್ ಕಾರ್ಡ್ ಮಾರಾಟ ಮಾಡುವ ಉದ್ದೇಶವಿದ್ದು, ಇದು ರಾಷ್ಟ್ರೀಯ ಸಾಲವನ್ನು ತ್ವರಿತವಾಗಿ ತೀರಿಸಲು ಸಹಾಯ ಮಾಡಲಿದೆ ಎಂದು ಅವರು ವಿವರಿಸಿದರು.
EB-5 ಯೋಜನೆಯು ಅಮೆರಿಕದ ವ್ಯವಹಾರಗಳಲ್ಲಿ ಹೂಡಿಕೆ ಮಾಡುವ ಭರವಸೆ ನೀಡುವ ವಿದೇಶಿಯರಿಗೆ, ಗ್ರೀನ್ ಕಾರ್ಡ್ಗಳನ್ನು ನೀಡುತ್ತದೆ. ನಾವು ಈಗ ಸುಮಾರು 5 ಮಿಲಿಯನ್ ಅಮೆರಿಕನ್ ಡಾಲರ್ ಮೊತ್ತದ ಗೋಲ್ಡ್ ಕಾರ್ಡ್ಗಳನ್ನು ಮಾರಾಟ ಮಾಡಲಿದ್ದೇವೆ. ಇದು ನಿಮಗೆ ಗ್ರೀನ್ ಕಾರ್ಡ್ ಸವಲತ್ತುಗಳನ್ನು ನೀಡುವುದರ ಜೊತೆಗೆ, ಅಮೆರಿಕನ್ ಪೌರತ್ವ ಪಡೆಯುವ ಮಾರ್ಗವನ್ನು ಸುಲಭಗೊಳಿಸಲಿದೆ ಯುಎಸ್ ಅಧ್ಯಕ್ಷರು ಆಶ್ವಾಸನೆ ನೀಡಿದ್ದಾರೆ.