Menu

ಕೃಷಿ ಪಂಪ್ ಸೆಟ್ ಗಳ ಸಕ್ರಮಕ್ಕೆ ನವೀಕೃತ ಶೀಘ್ರ ಸಂಪರ್ಕ ಯೋಜನೆ: ಸಚಿವ ಕೆಜೆ ಜಾರ್ಜ್

ರಾಮನಗರ: ಅಕ್ರಮ ಕೃಷಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೆ ತಂದಿದ್ದು, ರೈತರು ಸ್ವಯಂ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎಸ್ಕಾಂ ವತಿಯಿಂದ ಟ್ರಾನ್ಸ್ ಫಾರ್ಮರ್ ಒದಗಿಸಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗುವುದು ಎಂದು ಇಂಧನ ಸಚಿವ ಕೆ.ಜೆಯಜಾರ್ಜ್ ಹೇಳಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಇಂಧನ ಇಲಾಖೆಗೆ ಸಂಬಂಧಿಸಿದಂತೆ ಜಿಲ್ಲೆಯ ಜನ ಪ್ರತಿನಿಧಿಗಳು ಮತ್ತು ಇಲಾಖೆಯ ಅಧಿಕಾರಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಅವರು, “2023ರ ಸೆ. 22ರ ಬಳಿಕ ಸ್ಥಾಪಿಸಿರುವ ಅಕ್ರಮ ಕೃಷಿ ಪಂಪ್ ಸೆಟ್ ಗಳಿಗೆ ರೈತರು ಸ್ವಂತ ವೆಚ್ಚದಲ್ಲಿ ಲೈನ್ ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಿಕೊಂಡರೆ ಎರಡು ಅಥವಾ ಅದಕ್ಕಿಂತ ಹೆಚ್ಚು ಪಂಪ್ ಸೆಟ್ ಗಳಿಗೆ ಎಸ್ಕಾಂಗಳ ವತಿಯಿಂದಲೇ ಟ್ರಾನ್ಸ್ ಫಾರ್ಮರ್ ಒದಗಿಸಿ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲಾಗುವುದು,” ಎಂದರು.

“ರಾಜ್ಯದಲ್ಲಿ 2004ರಲ್ಲಿ ಕೃಷಿ ಪಂಪ್ ಸೆಟ್ ಗಳ ಅಕ್ರಮ-ಸಕ್ರಮ ಯೋಜನೆ ಜಾರಿಗೆ ಬಂದಿತ್ತಾದರೂ 2023ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 4.5 ಲಕ್ಷ ಅಕ್ರಮ ಕೃಷಿ ಪಂಪ್ ಸೆಟ್ ಗಳು ಇದ್ದವು. ಈ ಹಿನ್ನೆಲೆಯಲ್ಲಿ ಸರ್ಕಾರ 2023ರ ಸೆ. 22ಕ್ಕೆ ಮುನ್ನ ಸಂಪರ್ಕ ಪಡೆದಿದ್ದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ನಿರ್ಧರಿಸಿ ಈವರೆಗೆ 2.5 ಲಕ್ಷ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಿದೆ. ಉಳಿದವುಗಳನ್ನು ಇನ್ನು ಒಂದು ವರ್ಷದೊಳಗೆ ಸಕ್ರಮಗೊಳಿಸಲಾಗುವುದು”, ಎಂದು ತಿಳಿಸಿದರು.

“ಆದರೆ, 2023ರ ಸೆ. 22ರ ಬಳಿಕ ಸ್ಥಾಪಿಸಲಾದ ಅಕ್ರಮ ಪಂಪ್ ಸೆಟ್ ಗಳನ್ನು ಸಕ್ರಮಗೊಳಿಸಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಈ ಹಿನ್ನೆಲೆಯಲ್ಲಿ ನವೀಕೃತ ಶೀಘ್ರ ಸಂಪರ್ಕ ಯೋಜನೆ ಜಾರಿಗೊಳಿಸಲಾಗಿದೆ. ಈ ಯೋಜನೆಯಡಿ ಅಕ್ರಮ ಪಂಪ್ ಸೆಟ್ ಹೊಂದಿರುವ ರೈತರು ಎಸ್ಕಾಂಗಳಿಗೆ ನಿಗದಿತ ಠೇವಣಿ ಪಾವತಿಸಿ ಅವರ ವೆಚ್ಚದಲ್ಲಿ ಮೂಲ ಸೌಕರ್ಯ ಕಲ್ಪಿಸಬೇಕು. ಅದಾದ ಬಳಿಕ 2 ಅಥವಾ ಅದಕ್ಕಿಂತ ಹೆಚ್ಚಿನ ಪಂಪ್ ಸೆಟ್ ಗಳಿಗೆ ಅವುಗಳ ಸಾಮರ್ಥ್ಯ ಆಧರಿಸಿ ಎಸ್ಕಾಂಗಳ ವತಿಯಿಂದ ಟ್ರಾನ್ಸ್ ಫಾರ್ಮರ್ ಒದಗಿಸಿ ಸಂಪರ್ಕ ಸಕ್ರಮಗೊಳಿಸಲಾಗುವುದು”, ಎಂದು ಹೇಳಿದರು.

“ನವೀಕೃತ ಶೀಘ್ರ ಸಂಪರ್ಕ ಯೋಜನೆಯು ವಿದ್ಯುತ್ ಜಾಲದಿಂದ 500 ಮೀಟರ್ ಒಳಗಿರುವ ಎಲ್ಲಾ ಕೃಷಿ ಪಂಪ್ ಸೆಟ್ ಗಳಿಗೆ ಅನ್ವಯವಾಗುತ್ತದೆ. ವಿದ್ಯುತ್ ಜಾಲದಿಂದ 500 ಮೀಟರ್ ಗಿಂತ ದೂರ ಇರುವ ಪಂಪ್ ಸೆಟ್ ಗಳಿಗೆ ಸೋಲಾರ್ ಪಂಪ್ ಸೆಟ್ ಗಳನ್ನು ಕಡ್ಡಾಯವಾಗಿ ಅಳವಡಿಸಬೇಕಾಗುತ್ತದೆ. ಸೋಲಾರ್ ಪಂಪ್ ಸೆಟ್ ಗಳಿಗೆ ಕುಸುಮ್- ಬಿ ಯೋಜನೆಯಡಿ ಕೇಂದ್ರ ಸರ್ಕಾರದಿಂದ ಶೇ. 30, ರಾಜ್ಯ ಸರ್ಕಾರದಿಂದ ಶೇ. 50ರಷ್ಟು ಸಬ್ಸಿಡಿ ನೀಡಲಾಗುತ್ತದೆ. ಶೇ. 20ರಷ್ಟು ಮೊತ್ತವನ್ನು ಮಾತ್ರ ರೈತರು ಪಾವತಿಸಬೇಕು”, ಎಂದು ತಿಳಿಸಿದರು.

ವಿದ್ಯುತ್ ಸಂಪರ್ಕಕ್ಕೆ ಒಸಿ ಸಮಸ್ಯೆ ಕುರಿತು ಸಂಪುಟದಲ್ಲಿ ನಿರ್ಣಯ:
“ಸ್ವಾಧೀನಾನುಭವ ಪತ್ರ (ಒಸಿ) ಹೊಂದಿಲ್ಲದ ಯಾವುದೇ ವಾಣಿಜ್ಯ, ವಸತಿ ಕಟ್ಟಡಗಳಿಗೂ ವಿದ್ಯುತ್‌ ಸಂಪರ್ಕ ನೀಡಬಾರದು ಎಂಬ ಇಂಧನ ಇಲಾಖೆ ನಿಯಮದಿಂದ ಸಾಕಷ್ಟು ಸಮಸ್ಯೆಗಳಾಗುತ್ತಿರುವ ಬಗ್ಗೆ ಸಭೆಯಲ್ಲಿ ಶಾಸಕರು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಸಚಿವ ಕೆ.ಜೆ.ಜಾರ್ಜ್, ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಂಧನ ಇಲಾಖೆ ಈ ನೀತಿ ಜಾರಿಗೆ ತಂದಿದೆ. ಇದರಿಂದ ಸಮಸ್ಯೆಗಳಾಗುತ್ತಿರುವುದು ಸರ್ಕಾರದ ಗಮನದಲ್ಲಿದ್ದು, ಸಚಿವ ಸಂಪುಟ ಸಭೆಯಲ್ಲೂ ಚರ್ಚಿಸಿ ಇದಕ್ಕೆ ಪರಿಹಾರ ರೂಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಧಿಕಾರಿಗಳು ಸೂಕ್ತ ಪರಿಹಾರ ಸಿದ್ಧಪಡಿಸಿದ ಬಳಿಕ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ಜನರ ಸಮಸ್ಯೆ ಬಗೆಹರಿಸಲಾಗುವುದು”, ಎಂದರು.

“ಮನೆಗಳಲ್ಲಿ ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಪಿಎಂ ಸೂರ್ಯ ಘರ್ ಯೋಜನೆಯನ್ನು ಅಳವಡಿಸಿಕೊಳ್ಳುವಂತೆ ಮಾಸಿಕ 200 ಯೂನಿಟ್ ಗಿಂತ ಹೆಚ್ಚು ವಿದ್ಯುತ್ ಬಳಸುವ ಗ್ರಾಹಕರನ್ನು ಒಪ್ಪಿಸುವ ಕಾರ್ಯಕ್ಕೆ ಮುಂದಾಗಬೇಕು. ಆಯಾ ವಿಭಾಗದ ಜನಪ್ರತಿನಿಧಿಗಳ ಜತೆ ಆಗಾಗ್ಗೆ ಸಮಾಲೋಚಿಸಿ ಇಂಧನ ಇಲಾಖೆಗೆ ಸಂಬಂಧಿಸಿದ ಕೆಲಸಗಳನ್ನು ನಿರ್ವಹಿಸಬೇಕು”, ಎಂದು ಸಚಿವರು ಇದೇ ವೇಳೆ ಅಧಿಕಾರಿಗಳಿಗೆ ಸೂಚಿಸಿದರು.

ಜೂನ್ ಅಂತ್ಯದೊಳಗೆ ಲೈನ್ ಮೆನ್ ನೇಮಕ:
“ರಾಜ್ಯದಲ್ಲಿ 3000 ಲೈನ್ ಮೆನ್ ಗಳ ನೇಮಕ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ದೈಹಿಕ ತರಬೇತಿ ನಡೆಯುತ್ತಿದೆ. ಜೂನ್ ಅಂತ್ಯದೊಳಗೆ ಎಲ್ಲರಿಗೂ ಸ್ಥಳ ನಿಯುಕ್ತಿ ಮಾಡಿ ನೇಮಕಾತಿ ಆದೇಶ ಹೊರಡಿಸಲಾಗುವುದು”, ಎಂದು ಹೇಳಿದರು.

“ಮಳೆಗಾಲ ಈಗಾಗಲೇ ಆರಂಭವಾಗಿರುವುದರಿಂದ ಯಾವುದೇ ಸಮಸ್ಯೆ ಎದುರಾದರೂ ತಕ್ಷಣ ಬಗೆಹರಿಸಲು ಹೆಚ್ಚುವರಿ ಸಿಬ್ಬಂದಿ ನಿಯೋಜಿಸುವುದರ ಜತೆಗೆ ಹೆಚ್ಚುವರಿ ಸಲಕರಣೆಗಳನ್ನು ಸಿದ್ಧವಾಗಿಟ್ಟುಕೊಳ್ಳಬೇಕು ಎಂದು ಈಗಾಗಲೇ ಸೂಚಿಸಲಾಗಿದೆ. ಜೂನ್ ಅಂತ್ಯದ ವೇಳೆ ಲೈನ್ ಮೆನ್ ಗಳ ನೇಮಕವೂ ಆಗುವುದರಿಂದ ಮಳೆ- ಗಾಳಿಯಿಂದ ಹೆಚ್ಚು ಸಮಸ್ಯೆಯಾಗದಂತೆ ನೋಡಿಕೊಳ್ಳಲು ಸಹಾಯವಾಗಲಿದೆ”, ಎಂದರು.

ಕುಸುಮ್-ಸಿ ಅಡಿ 117 ಮೆ.ವ್ಯಾ. ವಿದ್ಯುತ್

“ಬೆಂಗಳೂರು ದಕ್ಷಿಣ (ರಾಮನಗರ) ಜಿಲ್ಲೆಯಲ್ಲಿ ಕುಸುಮ್-ಸಿ ಯೋಜನೆಯಡಿ ಕೃಷಿ ಫೀಡರ್ ಗಳ ಸೋಲರೈಸೇಷನ್ ಮೂಲಕ 117 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 21 ಸ್ಥಳಗಳನ್ನು ಗುರುತಿಸಲಾಗಿದ್ದು, 156 ಕಡೆ ಈಗಾಗಲೇ ಭೂಮಿ ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಸೂಕ್ತ ಭೂಮಿ ಸಿಗದಿದ್ದಲ್ಲಿ ಕೆರೆ ಅಂಗಳದಲ್ಲೂ ಕುಸುಮ್-ಸಿ ಯೋಜನೆಯಡಿ ಸೋಲಾರ್ ಫಲಕಗಳನ್ನು ಅಳವಡಿಸಲಾಗುವುದು”, ಎಂದು ತಿಳಿಸಿದರು.

“ಜಿಲ್ಲೆಯ ಅರಣ್ಯ ಭಾಗಕ್ಕೆ ಹೊಂದಿಕೊಂಡಿರುವ ಪ್ರದೇಶಗಳಲ್ಲಿ ರಾತ್ರಿ ವೇಳೆ ವನ್ಯ ಜೀವಿಗಳ ಹಾವಳಿ ಎದುರಾಗುತ್ತದೆ. ಹೀಗಾಗಿ ರೈತರ ಪಂಪ್ ಸೆಟ್ ಗಳಿಗೆ ಹಗಲು ವೇಳೆ 7 ಗಂಟೆ ವಿದ್ಯುತ್ ಒದಗಿಸುವಂತೆ ಸ್ಥಳಿಯ ಶಾಸಕರು ಮನವಿ ಮಾಡಿಕೊಂಡಾಗ ಪ್ರತಿಕ್ರಿಯಿಸಿದ ಸಚಿವರು, ಈಗಾಗಲೇ ಹಗಲು ವೇಳೆ 7 ಗಂಟೆ ವಿದ್ಯುತ್ ಒದಗಿಸಲು ಆದೇಶ ಹೊರಡಿಸಿದ್ದು, ಅದರಂತೆ ಕಾರ್ಯ ನಿರ್ವಹಣೆ ನಡೆಯುತ್ತಿದೆ. ತಾಂತ್ರಿಕ ಸಮಸ್ಯೆ ಇದ್ದರೆ ಮಾತ್ರ ಅಂತಹ ಪ್ರದೇಶಗಳಲ್ಲಿ ರಾತ್ರಿ ವೇಳೆ ವಿದ್ಯುತ್ ಒದಗಿಸಲಾಗುವುದು”, ಎಂದರು.

ವಿಧಾನಸಭೆ ಸದಸ್ಯರಾದ ಎಚ್.ಎ. ಇಕ್ಬಾಲ್ ಹುಸೇನ್, ಎಚ್.ಸಿ.ಬಾಲಕೃಷ್ಣ, ಸಿ.ಪಿ.ಯೋಗೇಶ್ವರ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್, ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಸೇರಿದಂತೆ ಜಿಲ್ಲೆಯ ಜನಪ್ರತಿನಿಧಿಗಳು, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳು ಸಭೆಯಲ್ಲಿದ್ದರು.

Related Posts

Leave a Reply

Your email address will not be published. Required fields are marked *