Menu

ಸಿಗಂದೂರು ಸೇತುವೆ ಲೋಕಾಪರ್ಣೆ ಮಾಡಿದ ಕೇಂದ್ರ ಸಚಿವ ನಿತಿನ್ ಗಡ್ಕರಿ

sigandoor

ಬೆಂಗಳೂರು: ಈ ಸೇತುವೆ ಮತ್ತು ರಸ್ತೆಯನ್ನು ಸಿಗಂಧೂರು ಚೌಡೇಶ್ವರಿ ಮಾತೆಗೆ ಸಮರ್ಪಿಸುವುದಾಗಿ ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿ ತಿಳಿಸಿದರು.
ಅಂಬಲಗೋಡು- ಕಳಸವಳ್ಳಿ- ಸಿಗಂಧೂರು ಸೇತುವೆಯನ್ನು ಇಂದು ಉದ್ಘಾಟಿಸಿ ಅವರು ಮಾತನಾಡಿದರು. ಇದೇ ವೇಳೆ 2 ಸಾವಿರ ಕೋಟಿಗೂ ಹೆಚ್ಚು ಮೂಲಸೌಕರ್ಯ ಯೋಜನೆಗಳ ಲೋಕಾರ್ಪಣೆ ಮತ್ತು ಶಂಕುಸ್ಥಾಪನೆಯನ್ನು ಅವರು ನೆರವೇರಿಸಿದರು.

ಇದೊಂದು ಐತಿಹಾಸಿಕ ಸೇತುವೆ. ಮಾತೆ ಸಿಗಂಧೂರು ಚೌಡೇಶ್ವರಿ ದೇವಿ ಸೇತುವೆ ಎಂದು ಇದರ ಹೆಸರನ್ನು ಪ್ರಕಟಿಸಿದರು.
ಕರ್ನಾಟಕದ ವಿಕಾಸಕ್ಕೆ ಮುಂದಿನ 5 ವರ್ಷಗಳಲ್ಲಿ 5 ಲಕ್ಷ ಕೋಟಿಯ ಕೆಲಸಗಳನ್ನು ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.

10 ಸಾವಿರ ಕೋಟಿ ಮೊತ್ತದ ಬೆಳಗಾವಿ- ಹುನಗುಂದ- ರಾಯಚೂರು ಚತುಷ್ಪಥ ಕಾಮಗಾರಿ ತ್ವರಿತಗೊಳಿಸಲಾಗುವುದು ಎಂದು ತಿಳಿಸಿದರು. ದೇಶದ ವಿವಿಧೆಡೆ ಆಗಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಕುರಿತು ಅವರು ಮಾಹಿತಿ ಕೊಟ್ಟರು. ದೆಹಲಿ- ಬೆಂಗಳೂರು ನಡುವಿನ ಅಂತರ ಕಡಿಮೆ ಮಾಡುವ ರಸ್ತೆ ಕುರಿತು ಅವರು ವಿವರ ನೀಡಿದರು. ಬೆಂಗಳೂರು -ಮೈಸೂರು ಎಕ್ಸ್‍ಪ್ರೆಸ್ ಹೈವೇ ಈಗಾಗಲೇ ಪೂರ್ಣಗೊಂಡಿದೆ ಎಂದರು.

ಬೆಂಗಳೂರು ವರ್ತುಲ ರಸ್ತೆಯನ್ನು 15 ಸಾವಿರ ಕೋಟಿಯಲ್ಲಿ ನಿರ್ಮಾಣ ಮಾಡಲಾಗುವುದು. ಶೇ 40 ರಷ್ಟು ಕಾಮಗಾರಿ ಮುಗಿದಿದೆ. ಇದು ಶೀಘ್ರ ಪೂರ್ಣವಾಗಲಿದ್ದು, ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ವಿವರಿಸಿದರು. ಬೆಂಗಳೂರು- ಮಂಗಳೂರು ರಸ್ತೆ ಅಭಿವೃದ್ಧಿ ಸೇರಿ ವಿವಿಧ ನೂತನ ಯೋಜನೆಗಳ ಕುರಿತು ಅವರು ಪ್ರಕಟಿಸಿದರು. ಶಿವಮೊಗ್ಗ- ಮಂಗಳೂರು ಚತುಷ್ಪಥದ ಡಿಪಿಆರ್ ಮಾಡಲಾಗುತ್ತಿದೆ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾತನಾಡಿ, ಈ ಭಾಗದ ಬಹುವರ್ಷಗಳ ಕನಸು ಇಂದು ನನಸಾಗಿದೆ ಎಂದು ಸಂತಸ ಸೂಚಿಸಿದರು. ಇಡೀ ದೇಶಕ್ಕೆ ಇದು ಪ್ರಗತಿಯ ಮೈಲಿಗಲ್ಲು ಎಂದು ವಿವರಿಸಿದರು. ಇದು ಜನರ ವಿಶ್ವಾಸ- ಜನಪ್ರತಿನಿಧಿಗಳ ಪರಿಶ್ರಮದ ಪ್ರತಿಫಲ ಎಂದರು. ಆಗುಂಬೆ ಘಾಟ್‍ನಲ್ಲಿ ಸುರಂಗ ಮಾರ್ಗ ನಿರ್ಮಾಣ, ಶಿವಮೊಗ್ಗ ಬೈಪಾಸ್ ವರ್ತುಲ ರಸ್ತೆ ಸೇರಿ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಅವರು ಮನವಿ ಮಾಡಿದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಮ್ಯಾನ್ ಆಫ್ ನ್ಯಾಷನಲ್ ಹೈವೇಸ್ ಎಂಬ ಹೆಸರು ಗಡ್ಕರಿಯವರಿಗೆ ಸರಿಹೊಂದುತ್ತದೆ ಎಂದು ನುಡಿದರು. ಗಡ್ಕರಿ ಅವರು ತಾವು ಶಂಕುಸ್ಥಾಪನೆ ಮಾಡಿದ್ದನ್ನು ತಾವೇ ಉದ್ಘಾಟಿಸುವ ಪ್ರಧಾನಿಯವರ ಸೂಚನೆಯನ್ನು ಪಾಲಿಸುತ್ತಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು. ಈ ಸೇತುವೆಗಾಗಿ ನಡೆದ ಹೋರಾಟವನ್ನು ನೆನಪಿಸಿದರು.

ಮೋದಿಯವರ ನೇತೃತ್ವದಲ್ಲಿ 2047ಕ್ಕೆ ಭಾರತವು ವಿಕಸಿತ ದೇಶ ಆಗಲಿದೆ. ಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾತಾ ಚೌಡೇಶ್ವರಿ ಸೇತುವೆ ಎಂದು ಹೆಸರು ನಾಮಕರಣ ಮಾಡಲು ವಿನಂತಿಸಿದರು.

ಹಿರಿಯರಾದ ಕಾಗೋಡು ತಿಮ್ಮಪ್ಪ ಅವರು ಮಾತನಾಡಿ, ಇದು ಸಾಗರದ ಇತಿಹಾಸದಲ್ಲಿ ಬಂಗಾರದಿಂದ ಬರೆದಂಥ ಕಾರ್ಯಕ್ರಮ ಎಂದು ಮೆಚ್ಚುಗೆ ಸೂಚಿಸಿದರು.

ಸಂಸದ ಬಿ.ವೈ.ರಾಘವೇಂದ್ರ ಸ್ವಾಗತ ಕೋರಿದರು. 60 ವರ್ಷಗಳ ಕನಸನ್ನು ಕೇವಲ 6 ವರ್ಷಗಳಲ್ಲಿ ಇದನ್ನು ಅನುಷ್ಠಾನಕ್ಕೆ ತಂದ ನಿತಿನ್ ಗಡ್ಕರಿ, ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸಿದರು. ಈ ಸೇತುವೆಗೆ ಸಿಗಂದೂರು ಚೌಡೇಶ್ವರಿ ಹೆಸರನ್ನು ಸೂಚಿಸುವಂತೆ ರಾಜ್ಯ ಸರಕಾರಕ್ಕೆ ಮನವಿ ಮಾಡಿದರು.

ಅವಿರತ ಹೋರಾಟಕ್ಕೆ ಶಾಶ್ವತ ವಿಮುಕ್ತಿ: ಶರಾವತಿ ಮುಕುಟದ ಮಲೆನಾಡ ಸೊಬಗಿನ ಐತಿಹಾಸಿಕ ಸಿಗಂಧೂರ ಸಿಂಧೂರವನ್ನು ಇಂದು ರಾಷ್ಟ್ರಕ್ಕೆ ಅರ್ಪಣೆ ಮಾಡಲಾಯಿತು. ಈ ಮೂಲಕ ಮುಳುಗಡೆ ಸಂತ್ರಸ್ತರ ಆರು ದಶಕಗಳ ಅವಿರತ ಹೋರಾಟಕ್ಕೆ ಶಾಶ್ವತ ವಿಮುಕ್ತಿ ನೀಡಲಾಯಿತು.

ಕರ್ನಾಟಕದ ಮಲೆನಾಡ ರಾಜಧಾನಿಯ ಕಲಶಕ್ಕೆ ಮುಕುಟದ ಮಣಿಯಾಗಿ ಪ್ರಜ್ವಲಿಸುತ್ತಿದ್ದ “ಶರಾವತಿ ನದಿ” ಯ ಹಿನ್ನೀರಿಗೆ ಅತ್ಯಾಧುನಿಕ ತಾಂತ್ರಿಕ ವ್ಯವಸ್ಥೆಯಿಂದ ನಿರ್ಮಿತವಾದ ರಾಜ್ಯದ ಇತಿಹಾಸ ಪುಟಗಳಲ್ಲಿ ಶಾಶ್ವತವಾಗಿ ದಾಖಲಾಗುವಂತ ಐತಿಹಾಸಿಕ ಕೇಬಲ್ ಆಧಾರಿತ 2.25 ಕಿ.ಮೀ ಉದ್ದದ ಸುಮಾರು 423 ಕೋಟಿ ಅನುದಾನದಲ್ಲಿ ದೇಶದ ಎರಡನೇ ಅತಿ ದೊಡ್ಡ ಸಂಪರ್ಕ ಸೇತುವೆ “ಅಂಬಾರಗೋಡ್ಲು – ಕಳಸವಳ್ಳಿ – ಸಿಗಂಧೂರು – ಕೊಲ್ಲೂರು (ಸ್ಥಳೀಯರ ಹೊಳೆಬಾಗಿಲು ಸೇತುವೆ)” ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಿಸಲಾಗಿದೆ.

ಇದನ್ನು ಇಂದು ಕೇಂದ್ರ ಭೂ ಸಾರಿಗೆ ಮಂತ್ರಾಲಯದ ಸಚಿವ ನಿತಿನ್ ಗಡ್ಕರಿ ಅವರು ಕೇಂದ್ರ ಆಹಾರ ನಾಗರೀಕ ಸರಬರಾಜು ಸಚಿವ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೊಂದಿಗೆ ಜೊತೆಗೂಡಿ ರಾಷ್ಟ್ರಕ್ಕೆ ಸಮರ್ಪಿಸಿದರು. ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ, ಸಂಸÀದ ಬಿ.ವೈ.ರಾಘವೇಂದ್ರ, ಸ್ಥಳೀಯ ನಾಯಕರು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.

ನಿರಂತರ ಆರು ದಶಕಗಳ ಹಿನ್ನೀರಿನ ಪ್ರದೇಶದ ಬಂಧುಗಳ ಹೋರಾಟದ ಕೂಗನ್ನು ಆಲಿಸಿ ಕೇಂದ್ರ ಸರ್ಕಾರ ಸುಮಾರು 423 ಕೋಟಿ ಅನುದಾನ ಬಿಡುಗಡೆಗೊಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆ ಇದಾಗಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರ ಸಂಕಲ್ಪದ ಫಲ ಮತ್ತು ನಿಮ್ಮೆಲ್ಲರ ನಿಸ್ವಾರ್ಥ ಪ್ರೀತಿಯ ಆಶೀರ್ವಾದ ಬಲದಿಂದ ಈ ಒಂದು ಐತಿಹಾಸಿಕ ಘಟನೆಗೆ ನಮ್ಮ ಮಲೆನಾಡು ಸಾಕ್ಷಿಯಾಗಿದೆ ಎಂದು ಬಿ.ವೈ.ರಾಘವೇಂದ್ರ ಅವರು ತಿಳಿಸಿದ್ದಾರೆ.

ಇದರೊಂದಿಗೆ ಕೇಂದ್ರ ಸರ್ಕಾರ ಅಧಿಕಾರ ನೀಡಿದ ಜನರ ಕೂಗಿಗೆ ತಕ್ಷಣವೇ ಸ್ಪಂದಿಸುವ ಮನೋಭಾವ ಇರುವ ಸರ್ಕಾರ ಎಂದು ಮತ್ತೊಮ್ಮೆ ದೇಶಕ್ಕೆ ಸಂದೇಶ ರವಾನಿಸಿದೆ. ಜೊತೆಗೆ ಶಂಕುಸ್ಥಾಪನೆ ಮಾಡಿದ ಯೋಜನೆಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಿ ತನ್ನ ಅಧಿಕಾರದ ಅವಧಿಯಲ್ಲಿ ಉದ್ಘಾಟನೆ ಮಾಡುವ ಸಂಪ್ರದಾಯ ಮುಂದುವರೆಸಿ ಇತಿಹಾಸ ನಿರ್ಮಿಸುತ್ತಿದೆ.

ಈ ಒಂದು ಸೇತುವೆ ಕೇವಲ ಶರಾವತಿ ಹಿನ್ನೀರಿನ ಸಂತ್ರಸ್ತರ ಬವಣೆ ಮಾತ್ರ ನೀಗಿಸುವುದಲ್ಲದೆ ನಮ್ಮ ಮಲೆನಾಡು ಹಾಗೂ ಕರಾವಳಿ ಜಿಲ್ಲೆಗಳ ಇನ್ನಷ್ಟು ಬಾಂಧವ್ಯ ಬೆಸೆಯುವ ಕಾಲಘಟಕ್ಕೆ ಮುನ್ನುಡಿ ಬರೆಯುವುದು ನಿಶ್ಚಿತ. ಜೊತೆಗೆ ಎರಡು ಜಿಲ್ಲೆಗಳ ಆರ್ಥಿಕ ಚಟುವಟಿಕೆ, ಪ್ರವಾಸೋದ್ಯಮ ಹಾಗೂ ವೈವಿಧ್ಯಮಯ ಸಂಸ್ಕತಿಗಳ ಸಮ್ಮಿಲನ ಗಟ್ಟಿಯಾಗುವುದು ಹೊಸ ಶಖೆಯ ಆರಂಭಕ್ಕೆ ಸಾಕ್ಷಿಯಾಗಲಿದೆ ಎಂದಿದ್ದಾರೆ.

ಈ ಸುವರ್ಣ ಅಕ್ಷರಗಳಲ್ಲಿ ಬರೆದಿಡುವಂಥ ಐತಿಹಾಸಿಕ ಸಂದರ್ಭದಲ್ಲಿ ಈ ಸೇತುವೆ ಹೋರಾಟಕ್ಕೆ ದಶಕಗಳಿಂದ ಹೋರಾಟ ನಡೆಸುತ್ತಿದ್ದ ಪ್ರಸನ್ನ ಕೆರೆಕೈ ಅವರು ಸೇರಿದಂತೆ ಇನ್ನೂ ನೂರಾರು ಹೋರಾಟಗಾರರನ್ನು ನೆನಪು ಮಾಡಿಕೊಂಡು ಹೃದಯಪೂರ್ವಕ ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ತಿಳಿಸಿದ್ದಾರೆ. ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾಪ್ಟನ್ ಬ್ರಿಜೇಶ್ ಚೌಟ, ಹಿರಿಯರಾದ ಕಾಗೋಡು ತಿಮ್ಮಪ್ಪ, ಸ್ಥಳೀಯ ಮುಖಂಡರು ಹಾಜರಿದ್ದರು.

ಶಾಸಕರಾದ ಅರಗ ಜ್ಞಾನೇಂದ್ರ, ಚನ್ನಬಸಪ್ಪ, ಹರತಾಳು ಹಾಲಪ್ಪ, ಗುರುರಾಜ್ ಗಂಟಿಹೊಳೆ, ವಿಧಾನ ಪರಿಷತ್ ಸದಸ್ಯರಾದ  ಭಾರತಿ ಶೆಟ್ಟಿ, ಡಿ.ಎಸ್.ಅರುಣ್, ಧನಂಜಯ ಸರ್ಜಿ, ಸಿಮೆಂಟ್ ಮಂಜುನಾಥ್, ಶ್ರೀಮತಿ ಹೇಮಲತಾ ನಾಯಕ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಗುರುಮೂರ್ತಿ, ಜಿಲ್ಲಾಧ್ಯಕ್ಷ ಜಗದೀಶ್, ಪ್ರಸನ್ನ ಕೆರೆಕೈ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು, ರೈತ ಮುಖಂಡರು, ಕಾರ್ಯಕರ್ತರು, ಸಿಗಂದೂರು ಚೌಡೇಶ್ವರಿ ದೇವಿಯ ಭಕ್ತರು ಹಾಗೂ ಸಾರ್ವಜನಿಕ ಬಂಧುಗಳು ಭಾಗವಹಿಸಿದ್ದರು.

Related Posts

Leave a Reply

Your email address will not be published. Required fields are marked *