“ಎತ್ತಿನಹೊಳೆ ಯೋಜನೆ ವಿಚಾರವಾಗಿ ಎದುರಾಗಿರುವ ತಾಂತ್ರಿಕ ಆಕ್ಷೇಪಣೆಗಳ ಬಗ್ಗೆ ಕೇಂದ್ರ ಪರಿಸರ ಸಚಿವರಿಗೆ ಸ್ಪಷ್ಟನೆ ನೀಡಿದ್ದು, ಆಕ್ಷೇಪಗಳನ್ನು ನಿವಾರಣೆ ಮಾಡುವುದಾಗಿ ಅವರು ಆಶ್ವಾಸನೆ ನೀಡಿದ್ದಾರೆ” ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
ನವದೆಹಲಿಯ ಕರ್ನಾಟಕ ಭವನದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದರು. ಕೇಂದ್ರ ಸಚಿವರ ಭೇಟಿ ವಿಚಾರವಾಗಿ ಕೇಳಿದಾಗ, “ಇಂದು ಕೇಂದ್ರ ಸರ್ಕಾರದ ಇಬ್ಬರು ಸಚಿವರನ್ನು ಭೇಟಿ ಮಾಡಿದ್ದೇವೆ. ಕೇಂದ್ರ ಪರಿಸರ ಇಲಾಖೆ ಸಚಿವರಾದ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿ ಎತ್ತಿನಹೊಳೆ ಯೋಜನೆ ವಿಚಾರವಾಗಿ ಚರ್ಚೆ ಮಾಡಲಾಗಿದ್ದು, ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ ಕೊಟ್ಟಿರುವ ವಿಚಾರವನ್ನು ಅವರಿಗೆ ವಿವರಿಸಿದ್ದೇವೆ. ಈ ಯೋಜನೆಯ ಸುಮಾರು 60-70% ಕಾಮಗಾರಿ ಮುಕ್ತಾಯಗೊಂಡಿದ್ದು, ಕೆಲವು ತಾಂತ್ರಿಕ ಕಾರಣಗಳಿಂದ ಯೋಜನೆ ಕಾಮಗಾರಿಗೆ ಅಡ್ಡಿ ಎದುರಾಗಿದೆ. ಈ ವಿಚಾರವಾಗಿ ಕೇಂದ್ರ ಪರಿಸರ ಇಲಾಖೆ ಮಾಡಿರುವ ಆಕ್ಷೇಪಣೆಗಳ ಬಗ್ಗೆ ಸ್ಪಷ್ಟನೆ ನೀಡಿದ್ದೇವೆ. ಇದು ಅತ್ಯುತ್ತಮ ಕುಡಿಯುವ ನೀರಿನ ಯೋಜನೆಯಾಗಿದ್ದು, ಅತ್ಯುನ್ನತ ತಂತ್ರಜ್ಞಾನದ ಹಾಗೂ ಏಷ್ಯಾದ ಅತಿ ದೊಡ್ಡ ಮೇಲ್ಗಾಲುವೆಯನ್ನು ನಿರ್ಮಾಣ ಮಾಡಲಾಗಿದೆ. ಈ ಕಾಮಗಾರಿಗೆ ರಾಷ್ಟ್ರಮಟ್ಟದ ಪ್ರಶಸ್ತಿಯೂ ಲಭಿಸಿದೆ” ಎಂದು ವಿವರಿಸಿದರು.
“ಜಲಶಕ್ತಿ ಸಚಿವರನ್ನು ಭೇಟಿ ಮಾಡಿ ಕಳಸಾ ಬಂಡೂರಿ ಯೋಜನೆ ವಿಚಾರವಾಗಿ ಚರ್ಚೆ ಮಾಡಲಾಗಿದೆ. ಗೋವಾ ಅವರು ನಮ್ಮ ರಾಜ್ಯದ ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಬಗ್ಗೆ ಕಾನೂನು ತಂಡದ ಜೊತೆ ಚರ್ಚೆ ಮಾಡಲಾಗಿದೆ. ವನ್ಯಜೀವಿ ಸಂರಕ್ಷಣೆ ವಿಚಾರದಲ್ಲಿ ಅವರು ಅವರ ರಾಜ್ಯದ ಬಗ್ಗೆ ಮಾತನಾಡಿಕೊಳ್ಳಲಿ. ನಮ್ಮ ರಾಜ್ಯದ ಬಗ್ಗೆ ಚರ್ಚೆ ಮಾಡುವ ಅಧಿಕಾರ ಅವರಿಗಿರುವುದಿಲ್ಲ. ಮಹದಾಯಿ ವಿಚಾರದಲ್ಲಿ ನ್ಯಾಯಾಲಯದ ತೀರ್ಪು ಬಂದ ನಂತರ ನಾವು ಟೆಂಡರ್ ಕರೆಯಲಾಗಿದ್ದು, ಕೆಲಸ ಮಾಡಬೇಕಾಗಿದೆ. ಕೇಂದ್ರ ಸರ್ಕಾರ ದಿಟ್ಟ ತೀರ್ಮಾನ ಮಾಡಬೇಕಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರಿಗೆ ಈ ವಿಚಾರ ವಿವರಿಸಿ, ನಂತರ ನಾವು ಕಾನೂನು ಪ್ರಕಾರವಾಗಿ ಏನು ಮಾಡಬೇಕೋ ಅದನ್ನು ಮಾಡುತ್ತೇವೆ” ಎಂದು ತಿಳಿಸಿದರು.
ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರದಲ್ಲಿ ನ್ಯಾಯಾಲಯದ ತೀರ್ಪಿನಂತೆ ಅಧಿಸೂಚನೆ ಹೊರಡಿಸುವ ಬಗ್ಗೆ ಜಲಶಕ್ತಿ ಸಚಿವರ ಜೊತೆ ಚರ್ಚಿಸಲಾಗಿದೆ. ಈ ಹಿಂದೆಯೇ ಈ ವಿಚಾರವಾಗಿ ಸಭೆ ನಡೆಯಲು ಸಮಯ ನಿಗದಿಯಾಗಿತ್ತು. ಆದರೆ ಕಾರಣಾಂತರಗಳಿಂದ ಸಭೆಯನ್ನು ಮುಂದೂಡಲಾಗಿತ್ತು. ಈ ಮಧ್ಯೆ ಸಂಸತ್ ಅಧಿವೇಶನ ಆರಂಭವಾಗುವ ಮುನ್ನ ನಮ್ಮ ಎಲ್ಲಾ ಸಂಸದರ ಜೊತೆ ಮೇಕೆದಾಟು, ಕೃಷ್ಣಾ ಮೇಲ್ದಂಡೆ ಹಾಗೂ ಮಹದಾಯಿ ಸೇರಿದಂತೆ ರಾಜ್ಯದ ಎಲ್ಲಾ ನೀರಾವರಿ ವಿಚಾರವಾಗಿ ಚರ್ಚೆ ಮಾಡಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಿ ಮಾಡಿ ಒತ್ತಡ ಹೇರುವ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.
ಅರಣ್ಯ ಇಲಾಖೆಗೆ ಪರ್ಯಾಯ ಭೂಮಿ
ಎತ್ತಿನಹೊಳೆ ಯೋಜನೆಯಲ್ಲಿ 423 ಎಕರೆ ಅರಣ್ಯ ಪ್ರದೇಶ ಬಳಕೆಗೆ ನಿರಾಕರಿಸಿರುವ ಬಗ್ಗೆ ಕೇಳಿದಾಗ, “ನಾವು ಈಗಾಗಲೇ ಪರ್ಯಾಯ ಭೂಮಿ ನೀಡಿದ್ದೇವೆ. ಇಲ್ಲಿ ಕೆಲವು ಪ್ರದೇಶ ಅರಣ್ಯ ಇಲಾಖೆ ಭೂಮಿಯಾಗಿದ್ದು, ಮತ್ತೆ ಕೆಲವು ಕಂದಾಯ ಇಲಾಖೆ ಭೂಮಿಯಾಗಿದೆ. ಈ ಜಾಗದಲ್ಲಿ 40-50 ವರ್ಷಗಳ ಹಿಂದೆ ರೈತರು ಈ ಜಮೀನು ಬಳಸುತ್ತಿದ್ದು, ನಾವು ಅವರಿಗೆ ಪರಿಹಾರ ನೀಡಿ ಈ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ. ಇದಾದ ನಂತರ ಈ ಜಾಗ ಅರಣ್ಯ ಇಲಾಖೆಯದ್ದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬಗ್ಗೆ ನಾವು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಿದ್ದೇವೆ. ಈ ಭಾಗದಲ್ಲಿ ಅರ್ಧಕ್ಕಿಂತ ಹೆಚ್ಚು ಕೆಲಸ ಆಗಿದೆ. ಅಲ್ಲಿ ಕಾಲುವೆಗೆ ಅಗೆದಿರುವ ಮಣ್ಣನ್ನು ಪಕ್ಕದಲ್ಲಿ ಹಾಕಿರುವುದಕ್ಕೆ ತಕರಾರು ಎತ್ತಿದ್ದಾರೆ. ಈಗ ಅದನ್ನು ತೆರವುಗೊಳಿಸಲು ನಾವು ಒಪ್ಪಿದ್ದೇವೆ. ನಮಗೆ ಕೆಲಸ ಆಗಬೇಕು. ಈ ಯೋಜನೆಗೆ 24 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಿದ್ದೇವೆ. ಈ ಎಲ್ಲಾ ವಿಚಾರ ತಿಳಿಸಿದ್ದು, ಅವರು ಅನುಮತಿ ನೀಡುವ ವಿಶ್ವಾಸ ನನಗಿದೆ” ಎಂದರು.
ಭದ್ರಾ ಮೇಲ್ದಂಡೆ ಯೋಜನೆ ಅನುದಾನಕ್ಕೆ ಮನವಿ
ಇದೇ ವೇಳೆ ಕೇಂದ್ರ ಜಲಶಕ್ತಿ ಸಚಿವರಾದ ಸಿ.ಆರ್ ಪಾಟೀಲ್ ಅವರನ್ನು ಭೇಟಿ ಮಾಡಿದ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಸರ್ಕಾರ ತನ್ನ ಘೋಷಣೆಯಂತೆ ಭದ್ರಾ ಮೇಲ್ದಂಡೆ ಯೋಜನೆಗೆ ಅನುದಾನ ನೀಡಬೇಕು ಎಂದು ಮನವಿ ಸಲ್ಲಿಸಿದರು.
“ಭದ್ರಾ ಮೇಲ್ದಂಡೆ ಯೋಜನೆಯು ಮಧ್ಯ ಕರ್ನಾಟಕ ಭಾಗದ ಅತಿ ದೊಡ್ಡ ಏತ ನೀರಾವರಿಯಾಗಿದೆ. ಈ ಯೋಜನೆ ಮೂಲಕ 29.90 ಟಿಎಂಸಿ ನೀರನ್ನು ಸಣ್ಣ ನೀರಾವರಿ ಯೋಜನೆ ಮೂಲಕ ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರು ಹಾಗೂ ದಾವಣಗೆರೆಯ 2,25,515 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಒದಗಿಸಲಾಗುವುದು. ಜೊತೆಗೆ ಬರಪೀಡಿತ ತಾಲೂಕುಗಳ 367 ಕೆರೆಗಳಿಗೆ ನೀರು ತುಂಬಿಸಿ ಅಂತರ್ಜಲ ಮರುಪೂರಣಕ್ಕೆ ನೆರವಾಗಲಿದೆ. ಈ ಯೋಜನೆ ಜಾರಿಗೆ ಪರಿಷ್ಕತ ಅಂದಾಜು ಮೊತ್ತ 21,473 ಕೋಟಿ ಆಗಿದೆ. ಈ ಯೋಜನೆಗೆ ಕೇಂದ್ರ ಜಲಶಕ್ತಿ ಸಚಿವಾಲಯದ ಸಲಹಾ ಸಮಿತಿಯು ಒಪ್ಪಿಗೆ ನೀಡಿದೆ. ಇನ್ನು ಕೇಂದ್ರ ಸರ್ಕಾರ 2023-24ನೇ ಸಾಲಿನ ಬಜೆಟ್ ನಲ್ಲಿ ಈ ಯೋಜನೆಗೆ 5,300 ಕೋಟಿ ಅನುದಾನ ಘೋಷಿಸಿತ್ತು. ಹೀಗಾಗಿ ಪಿಎಂಕೆಎಸ್ ವೈ-ಎಐಬಿಪಿ ಯೋಜನೆಯಡಿ ಅನುದಾನ ಬಿಡುಗಡೆಗೊಳಿಸಲು ಸಂಬಂಧಪಟ್ಟ ಇಲಾಖೆಗೆ ನಿರ್ದೇಶನ ನೀಡುವಂತೆ ಮನವಿ ಮಾಡುತ್ತೇನೆ” ಎಂದು ಶಿವಕುಮಾರ್ ಅವರು ಮನವಿ ಪತ್ರದಲ್ಲಿ ಕೋರಿದ್ದಾರೆ.