ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಈ ಬಾರಿ ಬಜೆಟ್ ಮಂಡನೆಯಲ್ಲಿ 75 ವರ್ಷದ ಸಂಪ್ರದಾಯ ಮುರಿದು ಬಜೆಟ್ ಭಾಷಣದ ಎರಡನೇ ಭಾಗಕ್ಕೆ ಒತ್ತು ಕೊಡಲಾಗುತ್ತದೆ ಎಂದು ಹೇಳಲಾಗುತ್ತಿದೆ. ಬಜೆಟ್ ಪ್ರಸ್ತುತಪಡಿಸುವ ರೀತಿ ಕೂಡ ಬೇರೆಯಾಗಿರಲಿದೆ ಎಂದು ಮೂಲಗಳು ತಿಳಿಸಿವೆ.
ಇದು ನಿರ್ಮಲಾ ಸೀತಾರಾಮನ್ ಅವರ ಸತತ ಒಂಬತ್ತನೇ ಬಜೆಟ್ ಆಗಿದ್ದು, ಇದು ದಾಖಲೆಯಾಗಿದೆ. ಬಜೆಟ್ ಭಾಷಣದ ಎರಡನೇ ಭಾಗದಲ್ಲಿ ತತ್ಕ್ಷಣದ ಆರ್ಥಿಕ ಆದ್ಯತೆಗಳಿಗೆ ಪ್ರಾಮುಖ್ಯತೆ ನೀಡಿದಂತೆ ದೂರಗಾಮಿ ಅಭಿವೃದ್ಧಿ ಗುರಿಗಳಿಗೂ ಆದ್ಯತೆ ಕೊಡಲಾಗುತ್ತದೆ. ದೀರ್ಘಾವಧಿ ರಚನಾತ್ಮಕ ಸುಧಾರಣೆಗಳ ಮೂಲಕ ಸರ್ಕಾರ ಆರ್ಥಿಕ ಶಿಸ್ತು ಅಭಿವೃದ್ಧಿ, ಸಮಾಜ ಕಲ್ಯಾಣದ ಸಮತೋಲನ ಸಾಧಿಸಲು ಯಾವ ಕ್ರಮ ತೆಗೆದುಕೊಳ್ಳುತ್ತದೆ ಎಂಬುದರ ವಿವರ ಇರಲಿದೆ ಎಂದು ಹೇಳಲಾಗಿದೆ.
ಬಜೆಟ್ ಭಾಷಣದ ಎರಡನೇ ಭಾಗದಲ್ಲಿ ಸರ್ಕಾರದ ಮಧ್ಯಮ ಮತ್ತು ದೂರಗಾಮಿ ಆರ್ಥಿಕ ಆದ್ಯತೆಗಳು ಹಾಗು ಸುಧಾರಣೆಗಳು ಹೇಗಿರಲಿವೆ ಎಂಬ ಸುಳಿವು ಕೊಡಲಾಗುತ್ತದೆ. ಹೊಸ ಯೋಜನೆಗಳ ಘೋಷಣೆ, ಬಂಡವಾಳ ವೆಚ್ಚ, ವಿವಿಧ ಇಲಾಖೆಗಳಿಗೆ ಅನುದಾನ ಹಂಚಿಕೆ, ಯೋಜನೆಗಳಿಗೆ ಅನುದಾನ ಹಂಚಿಕೆ ಇತ್ಯಾದಿ ಮೂಲಭೂತ ಬಜೆಟ್ ಅಂಶಗಳು ಇರುತ್ತವೆ.
ಬಜೆಟ್ ದಿನವೇ ವಾಣಿಜ್ಯ ಅಡುಗೆ ಅನಿಲ ಸಿಲಿಂಡರ್ ಬೆಲೆಯಲ್ಲಿ ೫೦ ರೂಪಾಯಿ ಏರಿಕೆ ಆಗಿದೆ ಎಂಬುದು ಗಮನಾರ್ಹ, ಚಿನ್ನಕ್ಕೆ ಸಂಬಂಧಿಸಿದ ತೆರಿಗೆ, ಶುಲ್ಕಗಳಲ್ಲಿ ಭಾರಿ ಪ್ರಮಾಣದ ಕಡಿತ ಬಜೆಟ್ನಲ್ಲಿ ಘೋಷಣೆಯಾಗಬಹುದು ಎಂದು ನಿರೀಕ್ಷಿಸಲಾ ಗಿದೆ.
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮ,ಯ್ಯ ಅವರು ಕರ್ನಾಟಕಕ್ಕೆ ಬಜೆಟ್ನ ಒಟ್ಟು ಮೊತ್ತದಲ್ಲಿ ಶೆ. ೪.೭೧ಕ್ಕೂ ಅಧಿಕ ಅನುದಾನವನ್ನು ತಮಗೆ ನೀಡಬೇಕೆಂದು ಕೇಂದ್ರಕ್ಕೆ ಮನವಿ ಮಾಡಿದ್ದಾರೆ. ರಾಜ್ಯಗಳು ದೇಶದ ಒಟ್ಟಾರೆ ಆರ್ಥಿಕ ಪ್ರಗತಿಯಲ್ಲಿ ಪ್ರಗತಿ ವಹಿಸುತ್ತದೆ ಎಂಬುದು ನಿರ್ವಿವಾದ ಸಂಗತಿ. ಈ ವಿಚಾರದಲ್ಲಿ ತಾರತಮ್ಯ ಸಲ್ಲದು. ಫೆಡರಲ್ ಆಡಳಿತದ ವ್ಯವಸ್ಯೆ ಕೇಂದ್ರವು ಬಜೆಟ್ ಮಂಡಿಸುವ ಮುನ್ನ ಎಲ್ಲ ರಾಜ್ಯಗಳ ಬೇಕು-ಬೇಡಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದು ಸೂಕ್ತ. ಪರೋಕ್ಷ ತೆರಿಗೆ ಸಂಗ್ರಹಣೆಯಲ್ಲಿ ಹೊಸದಾಗಿ ಜಾರಿಗೆ ಬಂದ ಜಿಎಸ್ಟಿಯಿಂದ ದೇಶದ ಬೊಕ್ಕಸಕ್ಕೆ ಉತ್ತಮ ಆದಾಯ ಒದಗುತ್ತಿರುವುದು ಸರಿಯಷ್ಟೆ. ಆದರೆ ಸಂಗ್ರಹವಾದ ಈ ತೆರಿಗೆಯನ್ನು ಯಾವ ರಾಜಕೀಯ ತಾರತಮ್ಯವೂ ಇಲ್ಲದೆ ಎಲ್ಲ ರಾಜ್ಯಗಳಿಗೆ ಸಮಾನ ಅನುಪಾತದಲ್ಲಿ ಅನುದಾನವನ್ನು ಹಂಚುವುದು ಕೇಂದ್ರದ ಹೊಣೆ.


