ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಯಾವುದೇ ಅನುಕೂಲ ಇಲ್ಲ, ರಾಜ್ಯಕ್ಕೆ ಯಾವುದೇ ದೊಡ್ಡ ಪಾಲು ಬಂದಿಲ್ಲ. ಯಾವ ಹೈಸ್ಪೀಡ್ ರೈಲೂ ಬರಲ್ಲ. 50:50 ಅನುಪಾತದಲ್ಲಿ ಮಾಡಲು ಆಗಲ್ಲ, 90:10 ಕೊಡಲಿ. ಆಗ ನಾವು 10% ಕೊಡುತ್ತೇವೆ. ಬೇರೆ ರಾಜ್ಯ ಗಳಿಗೆ ಅವರೇ ಮಾಡಿಕೊಟ್ಟಿದ್ದಾರೆ ಎಂದು ಡಿಸಿಎಂ ಡಿಕೆ. ಶಿವಕುಮಾರ್ ಕಿಡಿ ಕಾರಿದ್ದಾರೆ.
ಕೇಂದ್ರ ಬಜೆಟ್ಗೆ ಸಂಬಂಧಿಸಿದಂತೆ ಕನಕಪುರದಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಯಾವುದೋ ಯೋಜನೆಗೆ ಮಹಾತ್ಮ ಗಾಂಧಿ ಹೆಸರಿಟ್ಟಿದ್ದಾರೆ. ನಾವು ಮನರೇಗಾ ಹೆಸರಲ್ಲಿ ನಮ್ಮ ಕ್ಷೇತ್ರದಲ್ಲೇ ಮ್ಯಾರಥಾನ್ ಮಾಡಿದ್ದೇವೆ. ಮನರೇಗಾ ಬದಲಾವಣೆ ವಾಪಸ್ ತೆಗೆದುಕೊಳ್ಳಲಿ. ಹಿಂದೆ ಯಾವ ಯೋಜನೆ ಇತ್ತೋ ಅದೇ ಮುಂದುವರಿಯಲಿ, 60:40 ಯಾವುದೇ ಕಾರಣಕ್ಕೂ ಆಗದು ಎಂದು ಹೇಳಿದ್ದಾರೆ.
ಕೃಷಿ ವಲಯದಲ್ಲಿ ಎಐ ಬಳಕೆಗೆ ಒತ್ತು ನೀಡಿರುವ ಕುರಿತು ಮಾತನಾಡಿದ ಡಿಸಿಎಂ, ಮನರೇಗಾಗೂ ಎಐ ಬಳಕೆ ಮಾಡಿ ಕೂಲಿ ತೀರ್ಮಾನ ಮಾಡುತ್ತೇವೆ. ಎಐನಿಂದ ವ್ಯವಸಾಯಕ್ಕೆ ಪ್ರಯೋಜನ ಇಲ್ಲ. ರೇಷ್ಮೆಗೆ ಉತ್ತೇಜನ ಕೊಡಬೇಕು. ಸಕ್ಕರೆ ಬೆಲೆ ಯಾಕೆ ಏರಿಕೆ ಮಾಡುತ್ತಿಲ್ಲ, ಇದರಿಂದ ರೈತರಿಗೆ ನಷ್ಟ ಆಗುತ್ತಿದೆ. ಸಕ್ಕರೆ ಬೆಲೆ ಏರಿಸಲಿಲ್ಲ ಅಂದರೆ ಸಹಕಾರಿ ಕ್ಷೇತ್ರ ಮುಚ್ಚುವ ಹಂತಕ್ಕೆ ಬರುತ್ತದೆ. ನಮ್ಮ ರಾಜ್ಯದ ಹಲವು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಬ್ಬು ಬೆಳೆಯುತ್ತಾರೆ. ಒಟ್ಟಾರೆ ರೈತರಿಗೆ ಕೇಂದ್ರ ಏನು ಸಹಾಯ ಮಾಡಿದೆ, ಎಂಟರಿಂದ ಒಂಬತ್ತು ವರ್ಷ ಆದರೂ ಸಕ್ಕರೆ ಬೆಲೆ ಏಕೆ ಏರಿಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.
ಬಜೆಟ್ನಲ್ಲಿ ಬೆಂಗಳೂರು ಬಗ್ಗೆ ಅತಿಹೆಚ್ಚು ನಿರೀಕ್ಷೆ ಇತ್ತು. ಮೋದಿ ಇದನ್ನು ಗ್ಲೋಬಲ್ ಸಿಟಿ ಎಂದು ಹೇಳಿದ್ದಾರೆ, ಗ್ಲೋಬಲ್ ಸಿಟಿಗೆ ಏನು ಕೊಟ್ಟಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೆಂಗಳೂರು-ಪುಣೆ ನಡುವೆ ಕಾರಿಡಾರ್ ಆದ್ರೆ ರಾಜ್ಯಕ್ಕೆ ಪ್ರಯೋಜನ
ಕೇಂದ್ರ ಬಜೆಟ್ನಲ್ಲಿ ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು- ಚೆನ್ನೈ ನಡುವೆ ಹೈಸ್ಪೀಡ್ ರೈಲು ಕಾರಿಡಾರ್ ಅಭಿವೃದ್ಧಿ ಘೋಷಣೆ ಮಾಡಿರುವುದು ಸ್ವಾಗತಾರ್ಹ, ಇದರಿಂದ ರಾಜ್ಯಕ್ಕೆ ಹೆಚ್ಚು ಪ್ರಯೋಜನವೇನೂ ಇಲ್ಲ. ಈಗ ಘೋಷಿಸಿರುವ ಎರಡೂ ಮಾರ್ಗಗಳಲ್ಲಿ ರೈಲುಗಳು ಕರ್ನಾಟಕದೊಳಗೆ ನೂರು ಕಿಲೋಮೀಟರ್ ಕೂಡ ಓಡುವುದಿಲ್ಲ. ಇದರ ಬದಲು ಬೆಂಗಳೂರು-ಪುಣೆ ನಡುವೆ ಕಾರಿಡಾರ್ಗಾಗಿ ರಾಜ್ಯದ ಮತ್ತು ಮಹಾರಾಷ್ಟ್ರ ಸಂಸದರು ಪಕ್ಷಾತೀತವಾಗಿ ಆಗ್ರಹಿಸಬೇಕು ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕು, ಭದ್ರಾ ಮೇಲ್ದಂಡೆ ಯೋಜನೆಗೆ ಈಗಾಗಲೇ ಘೋಷಿಸಿರುವ 5,600 ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು ಎನ್ನುವುದು ರಾಜ್ಯದ ಆಗ್ರಹ. ಇವುಗಳ ಪ್ರಸ್ತಾಪವೇ ಇಲ್ಲ. ರೈತರಿಗೆ ನೆರವಾಗುವ ಯಾವ ಯೋಜನೆಯೂ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.


