ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ಕರೆತರಲಾಗಿದ್ದ ವಿಚಾರಣಾಧೀನ ಕೈದಿ, ಕುಖ್ಯಾತ ಕಳ್ಳ ಬಾಂಬೆ ಸಲೀಂ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ.
ಟಿನ್ನರ್ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿ ಡ್ರಾಮಾ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ಸಂತೋಷ್ ಹಾಗೂ ಹುಲಗಪ್ಪ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ‘ಸ್ಥಳಕ್ಕೆ ಎಸ್ಪಿಯವರನ್ನು ಕರೆಸಿ’ ಎಂದು ಗಲಾಟೆ ಮಾಡಿದ್ದಾನೆ.
ಇತ್ತೀಚೆಗೆ ಪೊಲೀಸ್ ಯೂನಿಫಾರಂ ಧರಿಸಿ ವೈರಲ್ ಆಗಿದ್ದ ಬಾಂಬೆ ಸಲೀಂ, ಆಡುಗೋಡಿ ಪೊಲೀಸ್ ವಸತಿಯ ಕಾನ್ಸ್‌ಟೇಬಲ್ ಮನೆಯಲ್ಲಿ ತಂಗಿದ್ದ ಆರೋಪ ಎದುರಿಸುತ್ತಿದ್ದಾನೆ. ಬಾಗೆಪಲ್ಲಿ ಪೊಲೀಸ್ ಠಾಣೆಯಲ್ಲಿ ಕಳೆದ ವರ್ಷ ದಾಖಲಾದ ಪ್ರಕರಣದ ಆರೋಪಿಯಾಗಿರುವ ಬಾಂಬೆ ಸಲೀಂ, ಈ ಹಿಂದೆ ಬಳ್ಳಾರಿ ಜೈಲಿನಲ್ಲಿದ್ದು, ಇತ್ತೀಚೆಗೆ ಕೊಪ್ಪಳ ಜೈಲಿಗೆ ವರ್ಗಾವಣೆಯಾಗಿದ್ದ. ಅನಾರೋಗ್ಯದ ಕಾರಣದಡಿ ಪೊಲೀಸರು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕರೆತಂದಿದ್ದರು. ಆಸ್ಪತ್ರೆಯಲ್ಲಿ ಈತ ಗಲಾಟೆ ಮಾಡಿ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ಕೊಪ್ಪಳ ನಗರ ಠಾಣೆಯಲ್ಲಿ ಪೊಲೀಸ್ ಹಾಗೂ ಜಿಲ್ಲಾಸ್ಪತ್ರೆಯ ಸಿಬ್ಬಂದಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ರಾಯಭಾಗದಲ್ಲಿ ಮಾರಣಾಂತಿಕ ಹಲ್ಲೆ
ಬೆಳಗಾವಿ ರಾಯಭಾಗ ತಾಲೂಕಿನ ಇಟ್ನಾಳ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಮಾರಣಾಂತಿಕ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ್ ಅವರ ಪುತ್ರ ಶಿವರಾಜ್ ಪಾಟೀಲ್ ಸೇರಿದಂತೆ 35ಕ್ಕೂ ಹೆಚ್ಚು ಜನರ ವಿರುದ್ಧ ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಅಕ್ಟೋಬರ್ 06 ರಂದು ಇಟ್ನಾಳ ಗ್ರಾಮದ ಸರ್ವೇ ನಂಬರ್ 43/6 ಮತ್ತು 202/2 ಜಮೀನು ಕಬ್ಜ ವಿವಾದ ಸಂಬಂಧ ಘಟನೆ ನಡೆದಿದೆ. ಶಿವರಾಜ್ ಪಾಟೀಲ್ ನೇತೃತ್ವದ ಗುಂಪು ಟ್ರಾಕ್ಟರ್ ಮತ್ತು ಕ್ರೂಸರ್‌ಗಳಲ್ಲಿ ಬಂದು, ಬಡಿಗೆ, ಕೋಲು ಹಾಗೂ ಮಾರಕಾಸ್ತ್ರಗಳೊಂದಿಗೆ ಡಾಂಗೆ ಕುಟುಂಬದ ಮೇಲೆ ದಾಳಿ ಮಾಡಿದ ಆರೋಪವಿದೆ. ಈ ದಾಳಿಯಲ್ಲಿ ಮಹಿಳೆ ಅಶ್ವಿನಿ ಸದಾಶಿವ ಡಾಂಗೆ ಮತ್ತು ವೃದ್ಧ ರಾಮಪ್ಪ ಡಾಂಗೆ ಅವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳು ಗೋಕಾಕದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ನಡೆದ ದಿನ ದೂರು ನೀಡಲು ಹೋದಾಗ ಹಾರೂಗೇರಿ ಪೊಲೀಸರು ಕೇಸ್ ದಾಖಲಿಸಿಕೊಂಡಿಲ್ಲ ಎಂದು ನೊಂದ ಕುಟುಂಬ ಆರೋಪಿಸಿದೆ. ಸಿಎಂ ಸಿದ್ದರಾಮಯ್ಯನವರ ಭೇಟಿಯ ನಂತರ ಅಕ್ಟೋಬರ್ 07 ರಂದು ಎಫ್ಐಆರ್ ದಾಖಲಾಗಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶಿವರಾಜ್ ಪಾಟೀಲ್ ಎ1 ಆರೋಪಿ, ಲಕ್ಷ್ಮಣ ಹೊನ್ನಳ್ಳಿ ಕುಟುಂಬದ ಸದಸ್ಯರು ಸೇರಿದಂತೆ 35ಕ್ಕೂ ಹೆಚ್ಚು ಜನರ ವಿರುದ್ಧ ದೂರು ದಾಖಲಾಗಿದೆ. ಇಬ್ಬರು ಆರೋಪಿಗಳನ್ನು ಮಾತ್ರ ಪೊಲೀಸರು ಬಂಧಿಸಿದ್ದಾರೆ.