ವಂದೇ ಮಾತರಂ ಗೀತೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದು ಪ್ರಧಾನಿ ನರೇಂದ್ರ ಮೋದಿಗೆ ಲೋಕಸಭೆಯಲ್ಲಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.
ವಂದೇ ಮಾತರಂ ಗೀತೆಗೆ 150 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸುದೀರ್ಘ ಚರ್ಚೆಗೆ ಲೋಕಸಭೆ ಅಧಿವೇಶನದಲ್ಲಿ ಸೋಮವಾರ ಅವಕಾಶ ನೀಡಲಾಗಿತ್ತು. ಮೊದಲು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಲೀಗ್ ಮುಖಂಡ ಮೊಹಮದ್ ಅಲಿ ಜಿನ್ನಾ ಅವರ ಅಸಮಾಧಾನದ ಹಿನ್ನೆಲೆಯಲ್ಲಿ ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಕತ್ತರಿ ಹಾಕಿದರು ಎಂದು ಹೇಳಿಕೆ ನೀಡಿದ್ದರು.
ಬ್ರಿಟಿಷರು ಬಂಗಾಳದಿಂದ ದೇಶವನ್ನು ಒಡೆದು ಆಳುವ ನೀತಿ ಆರಂಭಿಸಿದರು. ಆದರೆ ಇದೇ ಬಂಗಾಳದಿಂದ ವಂದೇ ಮಾತರಂ ಮೂಲಕ ಅವರ ಪ್ರಯತ್ನಕ್ಕೆ ತಡೆ ನೀಡಿದರು ಎಂದು ಮೋದಿ ಹೇಳಿದ್ದರು.
ಚರ್ಚೆಯ ಮೇಲೆ ಮಾತನಾಡಿದ ವಯನಾಡು ಸಂಸದೆ ಪ್ರಿಯಾಂಕಾ ವಾದ್ರಾ, ವಂದೇ ಮಾತರಂ ಗೀತೆಯನ್ನು ಮೊದಲು ಸರಿಯಾಗಿ ಅರ್ಥ ಮಾಡಿಕೊಳ್ಳಿ ಎಂದು ಮೋದಿ ಹೇಳಿಕೆಗೆ ಪರೋಕ್ಷವಾಗಿ ತಿರುಗೇಟು ನೀಡಿದರು.
ಬಂಗಾಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರವು ಈ ವಿಷಯವನ್ನು ಎತ್ತಿ ತೋರಿಸುತ್ತಿದೆ ಮತ್ತು ನಿಜವಾದ ಸಮಸ್ಯೆಗಳನ್ನು ತಪ್ಪಿಸುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಜವಾಹರಲಾಲ್ ನೆಹರೂ ಅವರನ್ನು “ಆಯ್ದ” ರೀತಿಯಲ್ಲಿ ಉಲ್ಲೇಖಿಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಈ ಬಗ್ಗೆ ಸಮಗ್ರ ಚರ್ಚೆಗೆ ಅವಕಾಶ ನೀಡುವ ಮೂಲಕ ಈ ವಿಷಯವನ್ನು ಒಂದೇ ಬಾರಿಗೆ ಮುಗಿಸಬೇಕು ಎಂದು ಆಗ್ರಹಿಸಿದರು.
ಈ ಸಂಸತ್ತಿನ ಅಮೂಲ್ಯ ಸಮಯವನ್ನು ಜನರು ನಮ್ಮನ್ನು ಆಯ್ಕೆ ಮಾಡಿದ ಕೆಲಸಕ್ಕಾಗಿ ಬಳಸೋಣ. ವಂದೇ ಮಾತಾರಂ ಗೀತೆ ಈಗಾಗಲೇ ಸಾರ್ವತ್ರಿಕವಾಗಿ ದೇಶಾದ್ಯಂತ ಹಾಡಲಾಗುತ್ತಿದೆ. ಪ್ರತಿಯೊಬ್ಬರ ಬಾಯಲ್ಲಿ ಇರುವ ಹಾಡಿನ ವಿವಾದವನ್ನು ಕೆಣಕಲು ಅಧಿವೇಶನದ ಅಮೂಲ್ಯ ಸಮಯ ವ್ಯರ್ಥ ಮಾಡುವುದು ಬೇಡ ಎಂದು ಅವರು ಆಗ್ರಹಿಸಿದರು.
ಬಂಗಾಳ ಚುನಾವಣೆ ಶೀಘ್ರದಲ್ಲೇ ಬರಲಿರುವುದರಿಂದ ಸರ್ಕಾರವು ವಂದೇ ಮಾತರಂ ಬಗ್ಗೆ ಚರ್ಚೆಯನ್ನು ಬಯಸಿದೆ. ಸರ್ಕಾರವು ವರ್ತಮಾನ ಮತ್ತು ಭವಿಷ್ಯವನ್ನು ನೋಡಲು ಬಯಸದ ಕಾರಣ ನಾವು ಹಿಂದಿನದನ್ನು ಪರಿಶೀಲಿಸಬೇಕೆಂದು ಬಯಸುತ್ತದೆ ಎಂದು ಅವರು ಹೇಳಿದರು.


