ಮಧ್ಯಮ ಕ್ರಮಾಂಕದಲ್ಲಿ ಅಭಿಗ್ಯಾನ್ ಕುಂದ್ ಸಿಡಿಸಿದ ದ್ವಿಶತಕದ ನೆರವಿನಿಂದ ಭಾರತ ತಂಡ 19 ವರ್ಷದೊಳಗಿನವರ ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಮಲೇಷ್ಯಾ ತಂಡವನ್ನು 315 ರನ್ ಗಳ ಭಾರೀ ಅಂತರದಿಂದ ಬಗ್ಗುಬಡಿದಿದೆ.
ದುಬೈನಲ್ಲಿ ಮಂಗಳವಾರ ನಡೆದ ಎ ಗುಂಪಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ತಂಡ 50 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 408 ರನ್ ಗಳ ಬೃಹತ್ ಮೊತ್ತ ಕಲೆ ಹಾಕಿತು. ಕಠಿಣ ಗುರಿ ಬೆಂಬತ್ತಿದ ಮಲೇಷ್ಯಾ ತಂಡ 31.1 ಓವರ್ ಗಳಲ್ಲಿ 93 ರನ್ ಗೆ ಪತನಗೊಂಡಿತು.
ಭಾರತದ ಪರ ಮಾರಕ ದಾಳಿ ಸಂಘಟಿಸಿದ ದೀಪೇಶ್ ದೇವೇಂದ್ರನ್ 5 ವಿಕೆಟ್ ಪಡೆದು ಮಿಂಚಿದರು, ಉದ್ಧವ್ ಮೋಹನ್ 2 ವಿಕೆಟ್ ಪಡೆದರು. ಮಲೇಷ್ಯಾ ಒಂದು ಹಂತದಲ್ಲಿ 37 ರನ್ ಗೆ 7 ವಿಕೆಟ್ ಕಳೆದುಕೊಂಡು 50 ರನ್ ದಾಟುವುದು ಕೂಡ ಕಷ್ಟವಾಗಿತ್ತು. ಆದರೆ ಹಮ್ಜಾ ಪೆಂಗ್ಗಿ 35 ರನ್ ಬಾರಿಸಿ ತಂಡದ ಮೊತ್ತವನ್ನು 100ರ ಗಡಿ ಸಮೀಪ ಕೊಂಡೊಯ್ದರು.
ಅಭಿಗ್ಯಾನ್ ದ್ವಿಶತಕದ ಅಬ್ಬರ
ಇದಕ್ಕೂ ಮುನ್ನ ಬ್ಯಾಟ್ ಮಾಡಿದ ಭಾರತ ತಂಡ ಅಭಿಗ್ಯಾನ್ ಕುಂದ್ ದ್ವಿಶತಕದ ಸಹಾಯದಿಂದ ಬೃಹತ್ ಮೊತ್ತ ದಾಖಲಿಸಿತು.
ಭಾರತ 10 ಓವರ್ ಆಗುತ್ತಿದ್ದಂತೆ ಅರ್ಧಶತಕ ಬಾರಿಸಿದ್ದ ವೈಭವ್ ಸೂರ್ಯವಂಶಿ ಸೇರಿದಂತೆ 3 ವಿಕೆಟ್ ಕಳೆದುಕೊಂಡಿತ್ತು. ವೈಭವ್ 26 ಎಸೆತಗಳಲ್ಲಿ 5 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಿಂದ 50 ರನ್ ಬಾರಿಸಿ ಔಟಾದರು.
ಈ ಹಂತದಲ್ಲಿ ಜೊತೆಯಾದ ವೇದಾಂತ್ ತ್ರಿವೇದಿ ಮತ್ತು ಅಭಿಗ್ಯಾನ್ ಕುಂದ್ 4ನೇ ವಿಕೆಟ್ ಗೆ 209 ರನ್ ಗಳ ಬೃಹತ್ ಜೊತೆಯಾಟದಿಂದ ತಂಡವನ್ನು ದೊಡ್ಡ ಮೊತ್ತದತ್ತ ಕೊಂಡೊಯ್ದರು.
ವೇದಾಂತ್ ತ್ರಿವೇದಿ 106 ಎಸೆತಗಳಲ್ಲಿ 7 ಬೌಂಡರಿ ಒಳಗೊಂಡ 90 ರನ್ ಬಾರಿಸಿ ಶತಕದ ಹೊಸ್ತಿಲಲ್ಲಿ ಎಡವಿದರೆ, ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ ಮನ್ ಅಭಿಗ್ಯಾನ್ ಕುಂದ್ 125 ಎಸೆತಗಳಲ್ಲಿ 17 ಬೌಂಡರಿ ಮತ್ತು 9 ಸಿಕ್ಸರ್ ಗಳ ಸಹಾಯದಿಂದ 209 ರನ್ ಬಾರಿಸಿ ಅಜೇಯರಾಗಿ ಉಳಿಯುವ ಮೊಲಕ ಟೂರ್ನಿಯ ಚೊಚ್ಚಲ ದ್ವಿಶತಕದ ಸಿಡಿಸಿದ ದಾಖಲೆಗೆ ಪಾತ್ರರಾದರು.
ಮಲೇಷ್ಯಾ ಪರ ಮೊಹಮದ್ ಅಕ್ರಮ್ 5 ವಿಕೆಟ್ ಪಡೆದರೂ ಭಾರತ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಲು ವಿಫಲರಾದರು.


