ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಲಕನೊಬ್ಬ ಮೊಬೈಲ್ ಗೇಮ್ ಚಟಕ್ಕೆ ಬಿದ್ದು ಹಣಕ್ಕಾಗಿ ಮನೆಯವರ ಮೇಲೆ ಹಲ್ಲೆ ನಡೆಸುತ್ತಿರುವುದರಿಂದ ಬೇಸತ್ತ ಸೋದರಮಾವ ಆತನನ್ನು ಕೊಲೆ ಮಾಡಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಈ ದುರಂತ ನಡೆದು ನಡೆದು ಒಂದು ವಾರದ ಬಳಿಕ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ. ಕುಂಬಾರಹಳ್ಳಿಯ ವಿನಾಯಕ ಲೇಔಟ್ ನಿವಾಸಿ ಅಮೋಘ ಕೀರ್ತಿ (14) ಕೊಲೆಯಾದ ಬಾಲಕ ಎಂದು ಗುರುತಿಸಲಾಗಿದೆ. ಆತನ ಮಾವ ನಾಗಪ್ರಸಾದ್ (50) ಕೊಲೆ ಮಾಡಿದಾತ. ಅಮೋಘ ಕೀರ್ತಿ ಸೋದರ ಮಾವ ನಾಗಪ್ರಸಾದ್ ಅವರೊಂದಿಗೆ ಕಳೆದ 8 ತಿಂಗಳಿಂದ ವಾಸವಾಗಿದ್ದನು.
ಬಾಲಕ ಫ್ರೀ ಫೈರ್ ಮೊಬೈಲ್ ಗೇಮ್‌ಗೆ ದಾಸನಾಗಿದ್ದು, ಗೇಮ್ ಆಡಲು ಪದೇ ಪದೆ ಹಣಕ್ಕಾಗಿ ಮಾವ ನಾಗಪ್ರಸಾದ್ ಅವರನ್ನು ಪೀಡಿಸುತ್ತಿದ್ದ. ಹಣ ನೀಡಲು ನಿರಾಕರಿಸಿದಾಗ ಹಲ್ಲೆ ಕೂಡ ನಡೆಸಿದ್ದ ಎಂದು ತಿಳಿದುಬಂದಿದೆ. ಇದರಿಂದ ಬೇಸತ್ತ ನಾಗಪ್ರಸಾದ್, ಬೆಳಗಿನ ಜಾವ ಅಮೋಘ ಕೀರ್ತಿ ನಿದ್ರೆಯಲ್ಲಿದ್ದಾಗ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ನಂತರ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿ ವಿಫಲನಾಗಿದ್ದ. ಮೆಜೆಸ್ಟಿಕ್‌ನಲ್ಲಿ ಮೂರು ದಿನ ಅಲೆದಾಡಿದ್ದ ಆತ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಕೊಲೆಯಾದ ಬಾಲಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಮರಣೋತ್ತರ ಪರೀಕ್ಷೆ ನಡೆಸಿ ಎಫ್‌ಐಆರ್ ದಾಖಲಿಸಿಕೊಂಡು ಆರೋಪಿ ನಾಗಪ್ರಸಾದ್‌ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಜೈಲಿಗೆ ಕಳುಹಿಸಿದ್ದಾರೆ.