ಧಾರವಾಡ: ಸಾಲದ ಭಾಧೆ ತಾಳಲಾರದೇ ಒಂದೇ ಕುಟುಂಬದ ನಾಲ್ವರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಚಿಕ್ಕಮಲ್ಲಿಗವಾಡ ಗ್ರಾಮದಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಚಿಕ್ಕಮಲ್ಲಿಗವಾಡದ ನಾರಾಯಣ ಶಿಂಧೆ (42), ಇವರ ತಂದೆ ವಿಠ್ಠಲರಾವ (85), ಇಬ್ಬರು ಮಕ್ಕಳಾದ ಶಿವರಾಜ (12) ಮತ್ತು ಶ್ರೀನಿಧಿ (10) ಮೃತಪಟ್ಟವರು. ಸಾಲಬಾಧೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಮೃತ ನಾರಾಯಣ ಶಿಂಧೆ ಬೇಕರಿವೊಂದರಲ್ಲಿ ಕೆಲಸಕ್ಕೆ ಹೋಗುತ್ತಿದ್ದರು. ಬೆಳಿಗ್ಗೆ 9.30 ರ ಸುಮಾರಿಗೆ ನಾರಾಯಣ ಶಿಂಧೆ ತನ್ನ ತಂದೆ ಮತ್ತು ಇಬ್ಬರು ಮಕ್ಕಳೊಂದಿಗೆ ಬೈಕ್ ಮೇಲೆ ಬಾವಿಯ ಕಡೆಗೆ ಹೋಗುವುದನ್ನು ಸ್ಥಳೀಯರು ನೋಡಿದ್ದಾರೆ.
ದೇವಸ್ಥಾನ ಇರುವುದರಿಂದ ದೇವಾಲಯಕ್ಕೆ ಹೋಗಬಹುದು ಎಂದು ಸ್ಥಳೀಯರು ಭಾವಿಸಿದ್ದರು. ಆದರೆ ಬಾವಿಯ ಮುಂಭಾಗದಲ್ಲಿ ಬೈಕ್ ನಿಲ್ಲಿಸಿ ಅಲ್ಲೇ ಚಪ್ಪಲಿಗಳನ್ನು ಬಿಟ್ಟು ಬಾವಿಗೆ ಹಾರಿದ್ದಾರೆ ಎಂದು ಹೇಳಲಾಗುತ್ತಿದೆ.
ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಹಾಗೂ ಗ್ರಾಮೀಣ ಠಾಣೆ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿ, ಪ್ರಾಥಮಿಕ ಮಾಹಿತಿ ಕಲೆ ಹಾಕಿದ್ದಾರೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಧಾರವಾಡ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ.


