ಉಡುಪಿ ಮೂಲದ ದಂಪತಿ ಮುಂಬೈ ಉದ್ಯಮಿಗೆ ನಾಲ್ಕು ಕೋಟಿ ರೂಪಾಯಿಗೂ ಹೆಚ್ಚಿನ ವಂಚನೆ ಆರೋಪ ಕೇಳಿಬಂದಿದೆ. ಉಡುಪಿ ಸೈಬರ್ ಠಾಣೆಯಲ್ಲಿ ದೂರು ದಾಖಲಾಗಿ, ನ್ಯಾಯಾಲಯದಿಂದ ತಡೆಯಾಜ್ಞೆ ಪಡೆದಿದ್ದ ಪ್ರಕರಣವನ್ನು ಮಂಗಳೂರು ಪೊಲೀಸ್ ಆಯುಕ್ತರು ಮರು ತನಿಖೆಗೆ ಆದೇಶಿಸಿದ್ದಾರೆ.
ಹರಾಜಿಗೆ ಬಂದ ಫ್ಲ್ಯಾಟ್, ಚಿನ್ನ ಖರೀದಿಸುವ ನೆಪದಲ್ಲಿ ಈ ಭಾರಿ ವಂಚನೆ ಮಾಡಲಾಗಿದೆ. .ಹರಾಜಿನಲ್ಲಿ ಫ್ಲ್ಯಾಟ್ ಮತ್ತು ಚಿನ್ನದ ಖರೀದಿಸಿ ಕೊಡುವುದಾಗಿ ನಂಬಿಸಿ ಮುಂಬೈ ಮೂಲದ ಉದ್ಯಮಿ ಮಮತಾ ಶೆಟ್ಟಿಗೆ 4.78 ಕೋಟಿ ರೂ. ವಂಚನೆ ನಡೆಸಿರುವ ಆರೋಪದಡಿ ಉಡುಪಿಯ ಸುಹಾಸಿನಿ ಶೆಟ್ಟಿ ಹಾಗೂ ಪತಿ ಪುನೀತ್ ಶೆಟ್ಟಿ ವಿರುದ್ಧ ಪ್ರಕರಣ ದಾಖಲಾಗಿದೆ.
ಮಮತಾ ಶೆಟ್ಟಿಗೆ ದೂರದ ಸಂಬಂಧಿಯಾಗಿರುವ ಸುಹಾಸಿನಿ, 2024ರ ಜನವರಿಯಿಂದ ಜೂನ್‌ವರೆಗೆ 4.78 ಕೋಟಿ ರೂ. ಹಣ ಪಡೆದಿರುವುದಾಗಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಹರಾಜಿನಲ್ಲಿ ಚಿನ್ನ, ಫ್ಲ್ಯಾಟ್ ಹಾಗೂ ಸ್ಕ್ರಾಪ್ ವ್ಯವಹಾರದಲ್ಲಿ ಲಾಭಕರ ಹೂಡಿಕೆ ಮಾಡಿಕೊಡುವುದಾಗಿ ಭರವಸೆ ನೀಡಿ ಹಣ ಪಡೆದುಕೊಂಡಿದ್ದರೂ, ನಂತರ ಯಾವುದೇ ಆಸ್ತಿ ಖರೀದಿಸಿ ಕೊಡದೆ ವಂಚನೆ ಮಾಡಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ 2024ರಲ್ಲಿ ಉಡುಪಿ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸುಹಾಸಿನಿ ಶೆಟ್ಟಿ ನ್ಯಾಯಾಲಯದಿಂದ ಪ್ರಕರಣಕ್ಕೆ ತಡೆಯಾಜ್ಞೆ ತಂದಿದ್ದಾರೆ. ಕಿಶೋರ್ ಶೆಟ್ಟಿ ಮತ್ತು ನವೀನ್ ಮೂಲ್ಕಿ ಎನ್ನುವವರ ಮೂಲಕ ಸಂಧಾನ ಮಾತುಕತೆ ನಡೆದಿತ್ತಾದರೂ ಅದು ವಿಫಲವಾಗಿದೆ.
ಸುಹಾಸಿನಿ ಮತ್ತು ಪತಿ ಮಣಿಪಾಲದಿಂದ ಮಂಗಳೂರಿಗೆ ಸ್ಥಳಾಂತರಗೊಂಡ ಬಳಿಕ ಮಮತಾ ಶೆಟ್ಟಿ ಮಂಗಳೂರು ಪೊಲೀಸ್ ಆಯುಕ್ತರನ್ನು ಸಂಪರ್ಕಿಸಿ ಮರು ತನಿಖೆಗೆ ಮನವಿ ಮಾಡಿದ್ದಾರೆ. ಪ್ರಕರಣ ಮರು ಪರಿಶೀಲಿಸುವುದಾಗಿ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ ಎನ್ನಲಾಗಿದೆ.


