Wednesday, December 31, 2025
Menu

ಉದಯಕಾಲ ಸಿಇಒ ಡಿ.ಬಿ. ಬಸವರಾಜು ಅವರಿಗೆ “ಪ್ರೈಡ್ ಆಫ್ ಕರ್ನಾಟಕ” ಪ್ರದಾನ

ಕನ್ನಡ ಜನಮಾನಸದ ಪತ್ರಿಕೆ ಉದಯಕಾಲದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಿ.ಬಿ. ಬಸವರಾಜು ಅವರು ಬೆಂಗಳೂರು ಪ್ರೆಸ್ ಕ್ಲಬ್‌ನ ಪ್ರತಿಷ್ಠಿತ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಸ್ವೀಕರಿಸಿದರು.

ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಡಿ.ಬಿ.ಬಸವರಾಜು ಅವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ಪ್ರದಾನ ಮಾಡಿ ಹುರಿದುಂಬಿಸಿದರು. ಕನ್ನಡ ಪತ್ರಿಕಾ ಕ್ಷೇತ್ರದಲ್ಲಿ ೨೬ ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿರುವ ಉದಯಕಾಲದ ಸಿಇಒ ಡಿ. ಬಿ.ಬಸವರಾಜು ಅವರು ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವ ಮೂಲಕ ಬದುಕಿನಲ್ಲಿ ಧನ್ಯತಾ ಭಾವವನ್ನು ಅನುಭವಿಸಿದರು.

ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್, ಸಚಿವರಾದ ಮಧು ಬಂಗಾರಪ್ಪ, ರಹೀಂಖಾನ್, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ದ ಅಧ್ಯಕ್ಷ ಎನ್.ಎ.ಹ್ಯಾರಿಸ್, ಬೆಂಗಳೂರು ಪ್ರೆಸ್ ಕ್ಲಬ್‌ನ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ ಬೆಳ್ಳಿತಟ್ಟೆ ಸೇರಿದಂತೆ ಕ್ಲಬ್‌ನ ಪದಾಧಿಕಾರಿಗಳು, ಹಿರಿಯ ಪತ್ರಕರ್ತರು ಮತ್ತು ಗಣ್ಯರು ಡಿ.ಬಿ. ಬಸವರಾಜು ಅವರ ಪ್ರಶಸ್ತಿ ಸ್ವೀಕಾರಕ್ಕೆ ಸಾಕ್ಷಿಯಾದರು.

ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಸಾತನೂರು ಹೋಬಳಿಯ ದಾಳಿಂಬದಂತಹ ಸಣ್ಣ ಗ್ರಾಮದ ರೈತ ಕುಟುಂಬದಲ್ಲಿ ಜನಿಸಿ ನಾಡಿನ ಪ್ರತಿಷ್ಠಿತ ಪತ್ರಿಕೆಗಳಾದ ವಿಜಯಕರ್ನಾಟಕ, ಕನ್ನಡಪ್ರಭ, ವಿಶ್ವವಾಣಿಯಲ್ಲಿ ಗುರುತರ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿ ಏಷ್ಯಾ ನೆಟ್ ಕನ್ನಡ, ಟೈಮ್ಸ್ ಆಫ್ ಇಂಡಿಯಾ ಮತ್ತು ವಿ.ಆರ್.ಎಲ್ ಸಂಸ್ಥೆಯ ಮುಖ್ಯಸ್ಥರ ಮೆಚ್ಚುಗೆಗೆ ಪಾತ್ರರಾದ ಡಿ.ಬಿ.ಬಸವರಾಜು ಅವರು ತಮ್ಮ ಸುದೀರ್ಘ ಅನುಭವ ಮತ್ತು ಪರಿಶ್ರಮದ ಹಣವನ್ನು ಬಂಡವಾಳವಾಗಿ ಹೂಡಿ ಅತ್ಯಲ್ಪ ಅವಧಿಯಲ್ಲಿ ಉದಯಕಾಲ ಪತ್ರಿಕೆಗೆ ರಾಜ್ಯ ಮಟ್ಟದಲ್ಲಿ ಐದನೇ ಸ್ಥಾನ, ಎ.ಬಿ.ಸಿ. ಮಾನ್ಯತೆ ಮತ್ತು ಜನಮನ್ನಣೆಯನ್ನು ತಂದುಕೊಟ್ಟಿದ್ದು ನೂರಾರು ಜನರಿಗೆ ಉದ್ಯೋಗದಾತರಾಗಿ ಮೈದಳೆದದ್ದು ಸಾಧನೆಯ ಮೈಲುಗಲ್ಲು.

ದುಡಿಮೆಯೇ ದೇವರು, ಪರಿಶ್ರಮವೇ ಸಾಧನೆಗೆ ಮೆಟ್ಟಿಲು, ವೃತ್ತಿನಿಷ್ಠೆಯೇ ಗೆಲುವಿನ ಸೂತ್ರ ಎಂಬುದನ್ನು ಸ್ವಾನುಭವದಲ್ಲಿ ಕಂಡುಕೊಂಡು ಪ್ರಯೋಗಿಸಿ ಯಶಸ್ವಿಯಾಗಿರುವ ಡಿ.ಬಿ.ಬಸವರಾಜು ಅವರು ಇದೀಗ ಬೆಂಗಳೂರು ಪ್ರೆಸ್ ಕ್ಲಬ್‌ನ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿಗೆ ಸತ್ಪಾತ್ರರಾಗಿರುವುದು ಅವರ ಸಾಧನೆಗೆ ಹೊನ್ನಗರಿ ಮೂಡಿಸಿದೆ.

Related Posts

Leave a Reply

Your email address will not be published. Required fields are marked *