ಬೇಲೂರು ತಾಲೂಕಿನ ಮುತ್ತಗನ್ನೆ ಗ್ರಾಮದ ಬಳಿ ಬೈಕ್‌ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್‌ನಲ್ಲಿದ್ದ ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಬೇಲೂರು ಹೊನ್ನೇನಹಳ್ಳಿ ಗ್ರಾಮದ ಲೋಕೇಶ್ (25), ಚಿಕ್ಕಮಗಳೂರು ಮೇನಹಳ್ಳಿ ಗ್ರಾಮದ ಕಿರಣ್ (32) ಮೃತಪಟ್ಟ ಯುವಕರು.
ಗುರುವಾರ (ಇಂದು) ಲೋಕೇಶ್ ತಂಗಿ ಆರತಕ್ಷತೆ ಇತ್ತು. ಅದಕ್ಕಾಗಿ ಮಜ್ಜಿಗೆ, ಮೊಸರು ತರಲು ಇಬ್ಬರೂ ಬೈಕ್‌ನಲ್ಲಿ ಬೇಲೂರಿಗೆ ತೆರಳುತ್ತಿದ್ದರು. ಈ ವೇಳೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.
ಡಿಕ್ಕಿ ಹೊಡೆದ ರಭಸಕ್ಕೆ ಭಾವ-ಭಾಮೈದರಾದ ಲೋಕೇಶ್ ಹಾಗೂ ಕಿರಣ್ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಮೃತದೇಹಗಳು ಇದ್ದ ಜಾಗದಿಂದ 10 ಅಡಿ ದೂರದಲ್ಲಿ ಬೈಕ್ ಬಿದ್ದಿದೆ. ಮೃತದೇಹಗಳನ್ನು ಕಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬೇಲೂರು ಪೊಲೀಸ್ ಠಾಣೆಯ ಪಿಎಸ್‌ಐ ಪಾಟೀಲ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ತನಿಕೆ ಕೈಗೊಂಡಿದ್ದಾರೆ.
ಗಂಡನ ಮನೆಯಲ್ಲಿ ಕಿರುಕುಳ ಆರೋಪ: ಯುವತಿ ಆತ್ಮಹತ್ಯೆ
ಭದ್ರಾವತಿ ತಾಲೂಕಿನಲ್ಲಿ ಮದುವೆಯಾದ ಆರು ತಿಂಗಳಲ್ಲೇ ಗಂಡನ ಮನೆಯ ಕಿರುಕುಳಕ್ಕೆ ಬೇಸತ್ತು ಯುವತಿ ಭದ್ರಾ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹಂಚಿನ ಸಿದ್ದಾಪುರ ಗ್ರಾಮದ ಲತಾ (೨೫) ಆತ್ಮಹತ್ಯೆ ಮಾಡಿಕೊಂಡವರು.
ಲತಾ ಬಿಎಸ್‌ಸಿ ಹಾಗೂ ಬಿಎಡ್ ಪದವೀಧರೆ. ಏಪ್ರಿಲ್ 14ರಂದು ಶಿಕಾರಿಪುರದ ಗುರುರಾಜ್ ಎಂಬಾತನೊಂದಿಗೆ ವಿವಾಹವಾಗಿತ್ತು. ಆತ ಕೆಪಿಸಿಎಲ್‌ನಲ್ಲಿ ಸಹಾಯಕ ಎಂಜಿನಿಯರ್ (ಎಇಇ) ಆಗಿ ಕೆಲಸ ಮಾಡುತ್ತಿದ್ದಾನೆ. ಲತಾ ವಾಟ್ಸಪ್ ಸ್ಟೇಟಸ್‌ನಲ್ಲಿ ಡೆತ್‌ನೋಟ್ ಹಾಕಿ ನನ್ನ ಗಂಡ ಮತ್ತು ಅತ್ತೆ-ಮಾವಂದಿರು ನನ್ನನ್ನು ನಿರಂತರವಾಗಿ ಕಿರುಕುಳ ಮಾಡುತ್ತಿದ್ದಾರೆ. ಮಾನಸಿಕವಾಗಿ ನನ್ನನ್ನು ಒತ್ತಡಕ್ಕೆ ಒಳಪಡಿಸುತ್ತಿದ್ದಾರೆ ಎಂದು ಬರೆದಿದ್ದಾರೆ.
ಘಟನೆ ನಡೆದ ಬಳಿಕ ಬೆನ್ನಲ್ಲೇ ಲತಾ ಅವರ ಪತಿ ಗುರುರಾಜ್ ಹಾಗೂ ಕುಟುಂಬ ಸದಸ್ಯರು ನಾಪತ್ತೆಯಾಗಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪತಿ ಗುರುರಾಜ್, ಅತ್ತೆ, ಮಾವ ಮತ್ತು ಇತರ ಕುಟುಂಬ ಸದಸ್ಯರ ವಿರುದ್ಧ ಮಹಿಳೆಯನ್ನು ಆತ್ಮಹತ್ಯೆಗೆ ಪ್ರೇರೇಪಿಸಿದ ಆರೋಪದಡಿ ಪ್ರಕರಣ ದಾಖಲಾಗಿದೆ.


